ಜ್ಯೋತಿನಗರ ಸಮೀಪ ಅಮೃತಜಲ ಯೋಜನೆಯಡಿ ತೇಪೆ ಹಾಕಲಾಗಿರುವ ರಸ್ತೆಯ ಕಳಪೆ ಕಾಮಗಾರಿ ಪ್ರದೇಶ.  
ಉಡುಪಿ

ಕಳಪೆ ರಸ್ತೆ ಕಾಮಗಾರಿ ವಿರುದ್ಧ ಆಕ್ರೋಶ

ಇಂದಿರಾ ಎನ್ ಕೆ
ಮೂಡುಬಿದಿರೆ: ಅಮೃತಜಲ ಯೋಜನೆಯ ಪೈಪ್‌ಲೈನ್ ಅಳವಡಿಕೆಗಾಗಿ ಅಗೆದು, ಬಳಿಕ ನಡೆಸಲಾಗಿರುವ ಕಳಪೆ ತೇಪೆ ಕಾಮಗಾರಿಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಮಗಾರಿ ನಡೆಸಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು, ರಸ್ತೆಗಳನ್ನು ಉತ್ತಮ ಗುಣಮಟ್ಟದೊಂದಿಗೆ ಮರುನಿರ್ಮಿಸಬೇಕು ಎಂದು ಆಗ್ರಹಿಸಲಾಗಿದೆ.
ಜ್ಯೋತಿನಗರ ಸಮೀಪದ ರತನ್ ಗ್ಯಾರೇಜ್ ಬಳಿ ಬುಧವಾರ ಆಟೋರಿಕ್ಷಾ ಪಲ್ಟಿಯಾಗಿ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಕಳಪೆ ರಸ್ತೆ ದುರಸ್ತಿ ಮತ್ತೊಮ್ಮೆ ಗಂಭೀರ ಪ್ರಶ್ನೆಗೆ ಗುರಿಯಾಗಿದೆ.
ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ವೈಜ್ಞಾನಿಕವಾಗಿ ಮರುನಿರ್ಮಿಸದೆ ಕೇವಲ ಮೇಲ್ಮೈ ತೇಪೆ ಹಾಕಿ ಬಿಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಳೆ ಬಂದಾಗ ರಸ್ತೆಗಳು ಮತ್ತಷ್ಟು ಹದಗೆಡುತ್ತಿದ್ದು, ಹಲವೆಡೆ ಪೈಪ್‌ಲೈನ್‌ಗಳಿಂದ ನೀರು ಸೋರಿಕೆಯಾಗುತ್ತಿರುವುದರಿಂದ ರಸ್ತೆಗಳು ಕುಸಿಯುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಕಳಪೆ ಸ್ಥಿತಿ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಬೇಡಿಕೆಗಳು

ಅಮೃತಜಲ ಯೋಜನೆಯಡಿ ಅಗೆಯಲಾದ ರಸ್ತೆಗಳನ್ನು ಸಂಪೂರ್ಣವಾಗಿ ಗುಣಮಟ್ಟದ ಕಾಮಗಾರಿಯೊಂದಿಗೆ ಕೂಡಲೇ ಮರುನಿರ್ಮಿಬೇಕು. ಯೂನಿಯನ್ ಬ್ಯಾಂಕ್ ಹಾಗೂ ಸ್ಥಳೀಯ ಹೋಟೆಲ್ ಮುಂಭಾಗದ ಅಪಾಯಕಾರಿ ತಿರುವುಗಳಲ್ಲಿ ವೈಜ್ಞಾನಿಕ ಹಂಪ್ಸ್ ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಉನ್ನತ ಮಟ್ಟದ ತಾಂತ್ರಿಕ ಪರಿಶೀಲನೆ ನಡೆಸಿ, ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ತುರ್ತು ಆದ್ಯತೆ ನೀಡುಬೇಕು ಎಂದು ಆಗ್ರಹಿಸಿದ್ದಾರೆ.