ಉಡುಪಿಯಲ್ಲಿ 'ನಮ್ಮ ಉಡುಪಿ ಉತ್ಸವ'ವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಪ್ರಕಾಶ್​ ಅಡಿಗ, ಮಾಸ್ತಿ ಚೈತನ್ಯ ಅಯ್ಯಂಗಾರ್​, ಬಷೀರ್​, ಪ್ರಭಾಕರ್​ ಇತರರಿದ್ದರು. 
ಉಡುಪಿ

'ನಮ್ಮ ಉಡುಪಿ ಉತ್ಸವ' ಅಮೋಘ ಪ್ರಾರಂಭ

* ಶಾಸಕ ಯಶ್​ಪಾಲ್​ ಸುವರ್ಣ ಚಾಲನೆ

* ಜ.30ರ ವರೆಗೆ ಇರಲಿದೆ ಮನರಂಜನೆ

ಉಡುಪಿ: ಉಡುಪಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಪ್ರವಾಸೋದ್ಯಮ ಸಹಕಾರದಿಂದ 'ನಮ್ಮ ಉಡುಪಿ ಉತ್ಸವ' ಅಮೋಘವಾಗಿ ಶನಿವಾರದಿಂದ ಪ್ರಾರಂಭಗೊಂಡಿದೆ. ಉಡುಪಿಯ ಕರಾವಳಿ ಜಂಕ್ಷನ್​ ಸಮೀಪ, ಶಾರದಾ ಹೋಟೆಲ್​ ಹಿಂಭಾಗದಲ್ಲಿ ನಡೆಯಲಿರುವ 45 ದಿನಗಳ 'ನಮ್ಮ ಉಡುಪಿ ಉತ್ಸವ'ಕ್ಕೆ ಶಾಸಕ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು.
ಜನರಿಗಾಗಿ ಉತ್ಸವ
ಆರೋಗ್ಯ ಹಾಗೂ ಶಿಕ್ಷಣದ ಮೂಲಕ ಗಮನ ಸೆಳೆಯುವ ಉಡುಪಿಯು ಇತ್ತೀಚೆಗಿನ ಕೆಲ ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೂ ರಾಜ್ಯದ ಗಮನ ಸೆಳೆಯುತ್ತಿದೆ. ಉಡುಪಿ ಉತ್ಸವವು ಇಲ್ಲಿನ ಹಾಗೂ ಜಿಲ್ಲೆಯ ಜನರಿಗಾಗಿ ಆಯೋಜಿಸಲಾಗಿದೆ. ಕುಟುಂಬ ಸಮೇತ ಇಲ್ಲಿಗೆ ಬಂದು ದಿನಪೂರ್ತಿ ಸಂತಸದಿಂದ ಇರಬಹುದಾಗಿದೆ, ಜನತೆ ಈ ಉತ್ಸವದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಜಾಗದ ಮಾಲೀಕ ಪ್ರಕಾಶ್​ ಅಡಿಗ, ಉತ್ಸವದ ಸಂಯೋಜಕ ಮಾಸ್ತಿ ಚೈತನ್ಯ ಅಯ್ಯಂಗಾರ್​, ಬಷೀರ್​, ಪ್ರಭಾಕರ್​ ಇತರರಿದ್ದರು.

ವಿಶೇಷ ಆಕರ್ಷಣೆ

ಉಡುಪಿ ಉತ್ಸವದಲ್ಲಿ ಮತ್ಸ್ಯ ಕನ್ಯೆಯರ ಲೈವ್​ ಪ್ರದರ್ಶನ, 180 ಅಡಿ ಅಗಲ, 30 ಅಡಿ ಎತ್ತರದ ನಯಾಗರ ಫಾಲ್ಸ್​ನ ಮಾದರಿ ವಿಶೇಷ ಆಕರ್ಷಣೆಯಾಗಿದೆ. ಚಿತ್ತಾಕಾರದ ಲೈಟಿಂಗ್ಸ್​ನಲ್ಲಿ ಈ ಜಲಪಾತ ಕಂಗೊಳಿಸುತ್ತಲಿದೆ. ಯುರೋಪಿಯನ್​ ಸಿಟಿ ಮಾದರಿ, ವಸ್ತು ಪ್ರದರ್ಶನ ಹಾಗೂ ವಿವಿಧ ಬಗೆಯ ತಿಂಡಿ-ತಿನಿಸುಗಳೂ ಲಭ್ಯವಿದೆ. ಉಡುಪಿಯಲ್ಲಿ ಪ್ರಥಮ ಬಾರಿಗೆ ಅಮ್ಯೂಸ್​ಮೆಂಟ್​ ಅಳವಡಿಸಲಾಗಿದ್ದು, ಇಲ್ಲಿನ ಸುನಾಮಿ ರೈಡ್​, ಸ್ಕ್ರೀನ್​ ಟವರ್​ಗಳು ಗಮನ ಸೆಳೆಯುತ್ತಿದೆ. ಉಡುಪಿ ಉತ್ಸವದ ಪ್ರಥಮ ದಿನವೇ ಜನಜಂಗುಳಿ ಕಂಡುಬಂತು. ಜ.30ರ ವರೆಗೂ ಉತ್ಸವ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.