ಉಡುಪಿಯ ಡಾ. ಜಿ.ಶಂಕರ್ ಕಾಲೇಜ್ನಲ್ಲಿ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ಪ್ರೊ. ಎನ್.ಎಸ್. ಶೆಟ್ಟಿ ಉದ್ಘಾಟಿಸಿದರು. ಪ್ರೊ. ಡಾ.ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಡಾ. ರಾಜೇಂದ್ರ ಕೆ., ಡಾ. ಅಬ್ದುಲ್ ರಝಾಕ್ ಇದ್ದರು.
* ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಎನ್.ಎಸ್. ಶೆಟ್ಟಿ ಅಭಿಪ್ರಾಯ
* ಡಾ. ಜಿ.ಶಂಕರ್ ಕಾಲೇಜ್ನಲ್ಲಿ 'ಓರಿಯಂಟೇಷನ್' ಕಾರ್ಯಕ್ರಮ
ಉಡುಪಿ: ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಬದಲಾವಣೆ ಸ್ವೀಕರಿಸಿ, ನಿರಂತರವಾಗಿ ತಮ್ಮಲ್ಲಿರುವ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನದೊಂದಿಗೆ ಸಿದ್ಧರಾಗಬೇಕು. ಉತ್ಕೃಷ್ಟತೆಗಾಗಿ ಪ್ರಯತ್ನಿಸುವುದು ಈಗ ಬದುಕುಳಿಯುವ ತಂತ್ರವಾಗಿದೆ ಎಂದು ಅರ್ಥಶಾಸ್ತ್ರಜ್ಞ, ಶೈಕ್ಷಣಿಕ ಸಂಶೋಧಕ ಹಾಗೂ ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರೊಫೆಸರ್ ಎಮೆರಿಟಸ್ ಪ್ರೊ. ಎನ್.ಎಸ್. ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ 'ಓರಿಯಂಟೇಷನ್' ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜ್ನ ಪ್ರಾಂಶುಪಾಲೆ ಪ್ರೊ.ನಿಕೇತನಾ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದನ್ನೇ ಸಂಪೂರ್ಣವಾಗಿ ಅವಲಂಬಿಸಬಾರದು. ವಿದ್ಯಾರ್ಥಿಗಳು ವಿವೇಕದಿಂದ ತಂತ್ರಜ್ಞಾನ ಬಳಸಬೇಕು ಎಂದರು.
ಕಾಲೇಜ್ನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕೆ., ಸಹಾಯಕ ಪ್ರಾಧ್ಯಾಪಕ ಡಾ. ಅಬ್ದುಲ್ ರಝಾಕ್, ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ಪುನೀತ್ ತೆಂಡೂಲ್ಕರ್, ಆಶಾ ಉಪಸ್ಥಿತರಿದ್ದರು.
ವಿಜಿತಾ ಸ್ವಾಗತಿಸಿದರು. ಪೂಜಾ ಪರಿಚಯಿಸಿದರು. ರುತು ಕಾರ್ಯಕ್ರಮ ನಿರೂಪಿಸಿದರು.
ಬೇಟೆ ಮತ್ತು ಆಹಾರ ಸಂಗ್ರಹಣೆಯಿಂದ ಕೃಷಿಯತ್ತ ಸಾಗಲು ಮಾನವಕುಲಕ್ಕೆ ಕೋಟ್ಯಂತರ ವರ್ಷ ಬೇಕಾದವು. ಕೈಗಾರಿಕೀಕರಣಕ್ಕೆ ಸುಮಾರು 1 ಸಾವಿರ ವರ್ಷ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗಕ್ಕೆ ಸುಮಾರು 100 ವರ್ಷ ಹಾಗೂ ವಿವಿಧ ಚಟುವಟಿಕೆಗಳ ಡಿಜಿಟಲೀಕರಣಕ್ಕೆ ಸುಮಾರು 50 ವರ್ಷ ಬೇಕಾದವು. ಜಗತ್ತು ಇಂದು ಹಿಂದೆಂದೂ ಕಾಣದ ವೇಗದಲ್ಲಿ ಬದಲಾಗುತ್ತಿದೆ.