ಉಡುಪಿಯಲ್ಲಿ ಬಡಗುಬೆಟ್ಟು ಸೊಸೈಟಿ ಆಯೋಜಿಸಿದ್ದ 'ಸಹಕಾರ ಕ್ರೀಡಾ ಸಂಭ್ರಮ' ಕ್ರೀಡಾಕೂಟವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಸುಧಾಕರ ಎಸ್​. ನಾಯ್ಕ, ಪುರುಷೋತ್ತಮ ಪಿ. ಶೆಟ್ಟಿ, ರಾಜೇಶ ವಿ. ಶೇರಿಗಾರ, ಎಲ್​.ಉಮಾನಾಥ, ಪದ್ಮನಾಭ ನಾಯಕ, ಅಬ್ದುಲ್​ ರಝಾಕ್​, ವಿನಾಯಕ ಟಿ.ಎ., ಗಾಯತ್ರಿ ಭಟ್​, ಜಯಾ ಶೆಟ್ಟಿ ಇದ್ದರು.  
ಉಡುಪಿ

ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿಗಳಿಗೂ ಕ್ರೀಡಾಕೂಟ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಚಿಂತನೆ

* 'ಸಹಕಾರ ಕ್ರೀಡಾ ಸಂಭ್ರಮ' ಉದ್ಘಾಟನೆ

ಉಡುಪಿ: ಸಹಕಾರಿ ಕ್ಷೇತ್ರದಲ್ಲಿರುವ ಸಿಬ್ಬಂದಿ, ಸದಸ್ಯರಲ್ಲಿಯೂ ಸಹ ಕ್ರೀಡಾ ಪ್ರತಿಭೆಗಳಿದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರತಿವರ್ಷವೂ ಸಹ ಉಡುಪಿಯ ಬಡಗಬೆಟ್ಟು ಸೊಸೈಟಿ ಕ್ರೀಡಾಕೂಟ ಆಯೋಜಿಸಿ ಇತರೆಲ್ಲ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರಿ ಸಂಸ್ಥೆ ಒಗ್ಗೂಡಿಸಿ ಕ್ರೀಡಾಕೂಟ ಆಯೋಜಿಸುವ ಚಿಂತನೆ ಇದೆಯೆಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿಯ ಕ್ರಿಶ್ಚಿಯನ್​ ಹೈಸ್ಕೂಲ್​ ಮೈದಾನದಲ್ಲಿ ಬಡಗಬೆಟ್ಚು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ವತಿಯಿಂದ ಶುಕ್ರವಾರ (ನ.27) ಆಯೋಜಿಸಿದ್ದ 'ಸಹಕಾರ ಕ್ರೀಡಾ ಸಂಭ್ರಮ-2026' ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಒತ್ತಡ ನಿವಾರಣೆ

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ ಎಸ್​. ನಾಯ್ಕ ಮಾತನಾಡಿ, ಸಹಕಾರಿ ಸಂಸ್ಥೆಗಳ ಸಿಬ್ಬಂದಿ ನಿತ್ಯದ ಬ್ಯಾಂಕಿಂಗ್​ ಕಾರ್ಯದ ಒತ್ತಡ, ನಿಗದಿತ ಗುರಿ ಸಾಧನೆಯ ಒತ್ತಡದಲ್ಲಿರುತ್ತಾರೆ. ಅಂತಹ ಒತ್ತಡಗಳಿಂದ ಹೊರಬರಲು ಕ್ರೀಡೆ ಉತ್ತಮ ಮಾರ್ಗವಾಗಿದೆ ಎಂದರು.

ಸೊಸೈಟಿಯ ನಿವೃತ್ತ ಸಿಬ್ಬಂದಿ ಸೌಭಾಗ್ಯಾ ನಾಯಕ್​ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸೊಸೈಟಿಯ ಉಪಾಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ ವಿ. ಶೇರಿಗಾರ, ನಿರ್ದೇಶಕರಾದ ಎಲ್​.ಉಮಾನಾಥ, ಪದ್ಮನಾಭ ನಾಯಕ, ಅಬ್ದುಲ್​ ರಝಾಕ್​, ವಿನಾಯಕ ಟಿ.ಎ., ಗಾಯತ್ರಿ ಭಟ್​, ಜಯಾ ಶೆಟ್ಟಿ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಸೊಸೈಟಿಯ 12 ಶಾಖೆಯ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ದೈನಿಕ ಠೇವಣಿ ಸಂಗ್ರಾಹಕರು, ಪ್ಯಾನೆಲ್​ ಸದಸ್ಯರು, ಶಾಖಾ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಅಂಬಾಗಿಲು ಶಾಖೆಯ ವ್ಯವಸ್ಥಾಪಕ ಪ್ರಸನ್ನ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿಗಾರ ವಂದಿಸಿದರು. ನವೀನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೇವಲ 4 ಕೋಟಿ ರೂ. ಬಂಡವಾಳದೊಂದಿಗೆ ಆರಂಭಗೊಂಡ ಬಡಗಬೆಟ್ಟು ಸೊಸೈಟಿ ಇಂದು 750 ಕೋಟಿ ರೂಪಾಯಿಗೂ ಅಧಿಕ ಠೇವಣಿ ಹೊಂದಿದ್ದು ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಬದ್ಧತೆಯಾಗಿದೆ. ಸಿಬ್ಬಂದಿಗೆ ಕೆಲಸದ ಒತ್ತಡ ನಿವಾರಣೆ ಹಾಗೂ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹಿಸಲು ಪ್ರತಿವರ್ಷ ಕ್ರೀಡಾಕೂಟ ಆಯೋಜಿಸುತ್ತೇವೆ.
ಜಯಕರ ಶೆಟ್ಟಿ ಇಂದ್ರಾಳಿ. ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷ.