judgement 
ಉಡುಪಿ

ಬೈಕ್ ಸವಾರಗೆ ಪರಿಹಾರ ನೀಡಲು ಆದೇಶ

ಇಂದಿರಾ ಎನ್ ಕೆ
ಕಾಸರಗೋಡು: ಆಡು ಅಡ್ಡ ಬಂದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಾಳುವಿಗೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ವಿಮಾ ಕಂಪನಿಗೆ ಸೂಚಿಸಿದೆ.
ಸೀತಾಂಗೋಳಿ ನಿವಾಸಿ ಫ್ರಾನ್ಸಿಸ್ ಪಾಸ್ಕಲ್ ಡಿ ಸೋಜ ಸಲ್ಲಿಸಿದ ದೂರು ಪರಿಗಣಿಸಿ ಈ ತೀರ್ಪು ನೀಡಲಾಗಿದೆ. ಪಾಸ್ಕಲ್ ಡಿಸೋಜ ಕಳತ್ತೂರಿನಿಂದ ಕಟ್ಟತ್ತಡ್ಕ ದಾರಿಯಾಗಿ ಸೀತಾಂಗೋಳಿಗೆ ತನ್ನ ಬೈಕ್‌ನಲ್ಲಿ ಸಂಚರಿಸುವಾಗ ಪಳ್ಳಂ ಎಂಬಲ್ಲಿ ಆಡುಗಳ ಹಿಂಡೊಂದು ರಸ್ತೆಯಲ್ಲಿ ಅಸ್ತವ್ಯಸ್ತವಾಗಿ ಚಲಿಸಿದ ಪರಿಣಾಮ ಅಪಘಾತ ಸಂಭವಿಸಿತ್ತು. ಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಪಾಸ್ಕಲ್ ಅವರ ಚಿಕಿತ್ಸೆಗೆ ಹೆಚ್ಚಿನ ಮೊತ್ತ ವ್ಯಯವಾಗಿತ್ತು.
ಕುಂಬಳೆ ಪೊಲೀಸರಿಗೆ ದೂರು ಸಲ್ಲಿಸಿದರೂ ಆರೋಪಿ ಸ್ಥಾನದಲ್ಲಿ ಆಡುಗಳು ಆಗಿರುವುದರಿಂದ ಮೊಕದ್ದಮೆ ದಾಖಲಿಸಲು ಪೊಲೀಸರು ನಿರಾಕರಿಸಿದ್ದರು. ಇದೇ ಕಾರಣ ಮುಂದೊಡ್ಡಿ ವಿಮಾ ಕಂಪನಿಯೂ ಪರಿಹಾರ ನೀಡಲು ನಿರಾಕರಿಸಿತು. ಸಂತ್ರಸ್ತ ವ್ಯಕ್ತಿ ಗ್ರಾಹಕರ ದೂರು ಪರಿಹಾರ ಆಯೋಗದ ಮೊರೆ ಹೋಗಿದ್ದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ದೂರುದಾರರಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯಾಲಯ ವೆಚ್ಚ ನೀಡುವಂತೆ ಆದೇಶ ನೀಡಿದೆ.