ಪುರಸಭೆ ವ್ಯಾಪ್ತಿಯ ಸ್ಥಳವನ್ನು ರಾಜಕೀಯ ಪಕ್ಷಕ್ಕೆ ಕಚೇರಿಗಾಗಿ ನೀಡುವುದಕ್ಕೆ ಸಿಪಿಐಎಂ ಆಕ್ಷೇಪ ವ್ಯಕ್ತಪಡಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿತು. ಪ್ರಮುಖರಾದ ವಿ.ನರಸಿಂಹ, ಸುರೇಶ್ ಕಲ್ಲಾಗರ, ಎಚ್.ನರಸಿಂಹ, ಚಂದ್ರಶೇಖರ್ ಮೊದಲಾದವರಿದ್ದರು.
- ಸಿಪಿಐಎಂ ಆಕ್ಷೇಪಿಸಿ ಪುರಸಭಾ ಆಡಳಿತಾಧಿಕಾರಿಗೆ ಮನವಿ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪುರಸಭೆ ವ್ಯಾಪ್ತಿಯಲ್ಲಿ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆ ವ್ಯಾಪ್ತಿಯ ಸ್ಥಳವನ್ನು ರಾಜಕೀಯ ಪಕ್ಷಕ್ಕೆ ಕಚೇರಿಗಾಗಿ ನೀಡುವುದಕ್ಕೆ ಸಿಪಿಐಎಂ ಆಕ್ಷೇಪ ವ್ಯಕ್ತಪಡಿಸಿದ್ದು, ಕುಂದಾಪುರ ಉಪವಿಭಾಗಾಧಿಕಾರಿ, ಪುರಸಭಾ ಆಡಳಿತಾಧಿಕಾರಿ ರಶ್ಮಿ ಎಸ್.ಆರ್. ಅವರಿಗೆ ಮನವಿ ಸಲ್ಲಿಸಿದೆ.
ಈ ಹಿಂದೆಯೂ ಇತ್ತು ಪ್ರಸ್ತಾವನೆ
ರಾಜಕೀಯ ಪಕ್ಷದ ಕಚೇರಿಗೆ ನೀಡಲು ಉದ್ದೇಶಿಸಿರುವ ಜಾಗ ಲಗೇಜ್ ಟೆಂಪೋ ನಿಲ್ದಾಣವಾಗಿ ಬಳಕೆ ಆಗುತ್ತಿದೆ. ಈ ಜಾಗವನ್ನು ಈ ಹಿಂದೆಯೂ ರಾಜಕೀಯ ಪಕ್ಷಗಳಿಗೆ ನೀಡುವ ಪ್ರಸ್ತಾವನೆ ಇದ್ದು, ಈ ಬಗ್ಗೆ ಆಕ್ಷೇಪ ಬಂದಿದೆ. ಆಕ್ಷೇಪದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರ ವರದಿಯಂತೆ ಈ ಪ್ರದೇಶ ಪೊರಂಬೋಕು ರಸ್ತೆ ತೋಡು ಆಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಮಂಜೂರಾತಿಗೆ ಅವಕಾಶ ಇಲ್ಲ ಎಂಬುದಾಗಿ ವರದಿ ನೀಡಿದ್ದಾರೆ. ರಾಜಕೀಯ ಪಕ್ಷದ ಕಚೇರಿಗೆ ನೀಡುವುದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಕುಂದಾಪುರ ತಾಲೂಕು ಸಮಿತಿಯ ಆಕ್ಷೇಪವಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಿಪಿಐಎಂ ಹಿರಿಯ ಮುಖಂಡ ವಿ.ನರಸಿಂಹ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಮುಖಂಡರಾದ ಎಚ್.ನರಸಿಂಹ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್, ಆಟೋ ಸಂದ ಮುಖಂಡರಾದ ರಾಜು ದೇವಾಡಿಗ ಉಪಸ್ಥಿತರಿದ್ದರು.