ಅಪಘಾತಗೊಂಡ ದ್ವಿಚಕ್ರ ವಾಹನ ಹಾಗೂ ಗೂಡ್ಸ್ ರಿಕ್ಷಾ
ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಗೂಡ್ಸ್ ರಿಕ್ಷಾ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ನಿಟ್ಟಡೆ ಬಳಿ ಸಂಭವಿಸಿದೆ.
ವೇಣೂರು ಗ್ರಾಪಂ ವ್ಯಾಪ್ತಿಯ ಕರಿಮಣೇಲು ಗ್ರಾಮದ ಗಾಂಧಿನಗರ ತಿಮರಡ್ಡ ಮನೆ ನಿವಾಸಿ ರವೀಂದ್ರ ಮೂಲ್ಯ (47) ಮೃತರು. ಸಹೋದರ ಜಗದೀಶ್ ಮೂಲ್ಯ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ
ಗಾರೆ ಕೆಲಸಗಾರರಾದ ರವೀಂದ್ರ ಮೂಲ್ಯ, ಜಗದೀಶ್ ಮೂಲ್ಯ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬರುತ್ತಿದ್ದ ವೇಳೆ ವೇಣೂರಿನಿಂದ ಹೋಗುತ್ತಿದ್ದ ತರಕಾರಿ ಅಂಗಡಿ ವ್ಯಾಪಾರಿ ಮುತ್ತುಮೋನು ಎಂಬುವರ ಗೂಡ್ಸ್ ರಿಕ್ಷಾ ನಿಟ್ಟಡೆಯ ಕುಂಭಶ್ರೀ ಶಾಲಾ ಬಳಿ ಮುಖಾಮುಖಿ ಡಿಕ್ಕೆ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ರವೀಂದ್ರ ಮೂಲ್ಯ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರು. ಜಗದೀಶ್ ಮೂಲ್ಯ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ರಿಕ್ಷಾ ಚಾಲಕ, ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ನೆರವಾದರು. ಮೃತರು ತಾಯಿ, ಪತ್ನಿ, ಪುತ್ರ, ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.