ಉಡುಪಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಬಸ್ರೂರು ರಾಜೀವ್ ಶೆಟ್ಟಿ ಉದ್ಘಾಟಿಸಿದರು. ಡಾ. ಅಶೋಕ್ ವೈ.ಜಿ., ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಜಯಕರ್ ಶೆಟ್ಟಿ ಎಸ್., ಡಾ. ಗಾಯತ್ರಿ ಇದ್ದರು.
ರಾಜ್ಯ ರೆಡ್ ಕ್ರಾಸ್ ಸಭಾಪತಿ
ಬಸ್ರೂರು ರಾಜೀವ್ ಶೆಟ್ಟಿ ಅಭಿಪ್ರಾಯ
* ಕಾಲೇಜುಗಳ ರೆಡ್ ಕ್ರಾಸ್ ಅಧಿಕಾರಿಗಳಿಗೆ ಕಾರ್ಯಾಗಾರ
ಉಡುಪಿ: ಎಲ್ಲ ಕ್ಷೇತ್ರಗಳಲ್ಲಷ್ಟೇ ಅಲ್ಲದೆ ನಮ್ಮೆಲ್ಲರ ಬದುಕಿನಲ್ಲೂ ಸಹ ಇಂದು ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉತ್ತಮ ತರಬೇತಿಗಳ ಅಗತ್ಯವಿದೆ ಎಂದು ರಾಜ್ಯ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಜಿಲ್ಲಾ ರೆಡ್ ಕ್ರಾಸ್ ಘಟಕದ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲಾ ಪದವಿ ಕಾಲೇಜುಗಳ ರೆಡ್ ಕ್ರಾಸ್ ಅಧಿಕಾರಿಗಳ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತಾನಾಡಿದರು.
ಬಹುಮಾನ ವಿತರಣೆ
ಕಳೆದ ವರ್ಷ ಹಮ್ಮಿಕೊಂಡಿದ್ದ ಜಿನೇವಾ ಒಪ್ಪಂದ ಜಾಥಾ ಮತ್ತು ನಿಧಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಪೂರ್ಣ ಪ್ರಜ್ಞಾ ಕಾಲೇಜು, ದ್ವಿತೀಯ ಸ್ಥಾನ ಗಳಿಸಿದ್ದ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ತೃತೀಯ ಸ್ಥಾನ ಗಳಿಸಿದ್ದ ಸೈಂಟ್ ಮೇರಿಸ್ ಕಾಲೇಜು ಶಿರ್ವದ ಅಧಿಕಾರಿಗಳು ಮತ್ತು ಘಟಕದ ನಾಯಕರಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಮಾತನಾಡಿ ರೆಡ್ ಕ್ರಾಸ್ ಕಾರ್ಯಕ್ರಮಗಳ ವಿವರ ನೀಡಿದರು. ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಡಾ. ಅಶೋಕ್ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ರೆಡ್ ಕ್ರಾಸ್ ಘಟಕದ ಸಭಾಪತಿ ಜಯಕರ್ ಶೆಟ್ಟಿ ಎಸ್., ಖಜಾಂಚಿ ಶಿವರಾಮ್ ಶೆಟ್ಟಿ, ಜಿಲ್ಲಾ ಖಜಾಂಚಿ ರಮಾದೇವಿ ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಅಧಿಕಾರಿ ಎಂ.ಎಸ್. ದಿವ್ಯಾ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಟಿ. ವಂದಿಸಿದರು.