ಓಣಂ ಹಿನ್ನೆಲೆಯಲ್ಲಿ ಮುಳ್ಳೇರಿಯ ಪೇಟೆಯಲ್ಲಿ ಮಂಗಳವಾರ ಕಂಡುಬಂದ ಕರ್ನಾಟಕದ ಹೂವಿನ ವ್ಯಾಪಾರಿಗಳು.  
ಉಡುಪಿ

ಓಣಂಗೆ ತಟ್ಟಿದ ಬೆಲೆ ಏರಿಕೆ ಬಿಸಿ

ಮುಳ್ಳೇರಿಯ: ಓಣಂ ಹಬ್ಬದ ಹಿನ್ನೆಲೆಯಲ್ಲಿ ಮುಳ್ಳೇರಿಯ ಸೇರಿದಂತೆ ಗಡಿಪ್ರದೇಶದ ಮಾರುಕಟ್ಟೆಗಳಲ್ಲಿ ಕರ್ನಾಟಕದ ಹೂವಿನ ವ್ಯಾಪಾರಿಗಳ ಭರಾಟೆ ಹೆಚ್ಚಾಗಿದೆ. ಭಾರಿ ಮಳೆಯಿಂದಾಗಿ ಸ್ಥಳೀಯವಾಗಿ ಮಲ್ಲಿಗೆ, ಸೇವಂತಿಗೆ ಮುಂತಾದ ಹೂಗಳ ಪೂರೈಕೆ ಗಣನೀಯವಾಗಿ ಕಡಿಮೆಯಾಗಿದ್ದು, ನೆರೆಯ ಕರ್ನಾಟಕದಿಂದ ಹೂಗಳ ಆಗಮನ ಹೆಚ್ಚಾಗಿದೆ. ಇದು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಸಾರ್ವಜನಿಕರಿಗೆ ಪೂಕಳಂ ಸಿದ್ಧಪಡಿಸುವುದು ದುಬಾರಿಯಾಗಿ ಪರಿಣಮಿಸಿದೆ.

ಗಗನಕ್ಕೇರಿದ ದರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸ್ಥಳೀಯ ಹೂಗಳ ಇಳುವರಿ ಕುಸಿದಿದೆ. ಹೀಗಾಗಿ ಮಾರುಕಟ್ಟೆಗೆ ನೆರೆ ರಾಜ್ಯ ಕರ್ನಾಟಕದ ಹೂ ವ್ಯಾಪಾರಿಗಳು ಲಗ್ಗೆಯಿಟ್ಟಿದ್ದು ಹೂಗಳ ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ. ತಿರುಓಣಂ ಮತ್ತು ವರಮಹಾಲಕ್ಷ್ಮೀ ಪೂಜೆ ಒಂದೇ ಅವಧಿಯಲ್ಲಿ ಬಂದಿರುವುದರಿಂದ ಹೂಗಳಿಗೆ ಬೇಡಿಕೆ ದಿಢೀರ್ ಹೆಚ್ಚಾಗಿ ಬೆಲೆ ಗಗನಕ್ಕೇರಿದೆ.
ಪೂಕಳಂ ರಚಿಸಲು ಪ್ರಮುಖವಾಗಿ ಬಳಸುವ ಚೆಂಡು ಹೂ ಮತ್ತು ಸೇವಂತಿಗೆ ಬೆಲೆ ಪ್ರತಿ ಕಿಲೋಗೆ 500ರಿಂದ 800 ರೂ.ವರೆಗೆ ಏರಿಕೆಯಾಗಿ ಹಬ್ಬದ ಸಂಭ್ರಮಕ್ಕೆ ಬರೆ ಎಳೆದಿದೆ.
ಕುಟುಂಬಶ್ರೀ ಉದ್ಯಮ: ಓಣಂ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಕುಟುಂಬಶ್ರೀ ಮೂಲಕ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಸ್ಥಳೀಯವಾಗಿ ಚೆಂಡು ಹೂ ಬೆಳೆಸಿದೆ. ವರ್ಣರಂಜಿತ ಪೂಕಳಂ ಬಿಡಿಸಲು ಸಾರ್ವಜನಿಕರು ಉತ್ಸಾಹ ತೋರುತ್ತಿದ್ದರೂ ಹೂಗಳ ಅಭಾವ ಹಾಗೂ ಬೆಲೆ ಏರಿಕೆಯಿಂದಾಗಿ ಬಜೆಟ್ ಸರಿದೂಗಿಸುವುದೇ ಸವಾಲಾಗಿದೆ.