ಉಡುಪಿಯಲ್ಲಿ ಆಯೋಜಿಸಿದ್ದ ಓಣಂ ಸಂಭ್ರಮ ಕಾರ್ಯಕ್ರಮವನ್ನು ನೀನಾ ಕುರುಪ್​ ಉದ್ಘಾಟಿಸಿದರು. ಅರುಣಕುಮಾರ್​, ಅಭಿಲಾಶ್​ ಪಿ.ವಿ., ರಾನಿಯಾ ರಫೀಕ್​, ಪ್ರಶಾಂತ್​, ಬಿನ್ಸಿ ಎಂ. ಜಾರ್ಜ್​ ಇದ್ದರು.  
ಉಡುಪಿ

ಉಡುಪಿಯಲ್ಲಿ ಓಣಂ ಸಂಭ್ರಮ ಹೆಮ್ಮೆದಾಯಕ

* ಮಲಯಾಳಂ ಚಿತ್ರನಟಿ ನೀನಾ ಕುರುಪ್​ ಸಂತಸ

*  ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಓಣಂ ಉತ್ಸವವು ಕೇರಳದ ಪ್ರಮುಖ ಹಬ್ಬವಾಗಿದ್ದು, ಕೇರಳದಾದ್ಯಂತ 10 ದಿನ ವಿಜೃಂಭಣೆಯಿಂದ ಆಚರಿಸುತ್ತಾರೆ. ಕೇರಳದ ಹೊರಭಾಗದಲ್ಲಿ ಉಡುಪಿಯಲ್ಲೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಓಣಂ ಸಂಭ್ರಮ ನಡೆಯುತ್ತಿರುವುದು ಕಂಡು ಹೆಮ್ಮೆಯಾಗುತ್ತಿದೆ ಎಂದು ಮಲಯಾಳಂ ಚಿತ್ರನಟಿ ನೀನಾ ಕುರುಪ್​ ಸಂತಸ ವ್ಯಕ್ತಪಡಿಸಿದರು.
ಉಡುಪಿಯ ಅಂಬಾಗಿಲು ಅಮೃತ್​ ಗಾರ್ಡನ್​ನಲ್ಲಿ ಕೇರಳ ಸಮಾಜಂ ಉಡುಪಿ (ರಿ.) ವತಿಯಿಂದ ಆಯೋಜಿಸಿದ್ದ 2ನೇ ವರ್ಷದ ಓಣಂ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘಟನೆಗೆ ಬಲ
ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣಕುಮಾರ್​ ಮಾತನಾಡಿ, ಸಂಘಟನೆ ಆರಂಭವಾಗಿ ಕೆಲವು ವರ್ಷವಾಗಿದ್ದು, ಮೊದಲ ವರ್ಷದ ಓಣಂ ಆಚರಣೆಗೆ ಅಪಾರ ಬೆಂಬಲ ದೊರಕಿತ್ತು. ಇದೀಗ ಎರಡನೇ ವರ್ಷದ ಕಾರ್ಯಕ್ರಮಕ್ಕೂ ನಿರೀಕ್ಷೆಗೂ ಮೀರಿ ಕೇರಳ ಸಮಾಜಂ ಸದಸ್ಯರು ಹಾಗೂ ಉಡುಪಿ ಜನತೆ ಪಾಲ್ಗೊಂಡಿರುವುದು ಸಂಘಟನೆಗೆ ಮತ್ತಷ್ಟು ಬಲ ನೀಡಿದೆ ಎಂದರು.
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಟ್ರಸ್ಟಿ ಅಭಿಲಾಶ್​ ಪಿ.ವಿ., ಬಾಲ ಗಾಯಕಿ ರಾನಿಯಾ ರಫೀಕ್​, ಕೇರಳ ಸಮಾಜಂನ ಕಾರ್ಯದರ್ಶಿ ಪ್ರಶಾಂತ್, ಬಿನ್ಸಿ ಎಂ. ಜಾರ್ಜ್​ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ನೃತ್ಯ ಪ್ರದರ್ಶನ

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕೇರಳದ ಬಾಲ ಗಾಯಕಿ ರಾನಿಯಾ ರಫೀಕ್​ ಗಾಯನ ಕಾರ್ಯಕ್ರಮ ಓಣಂ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ತಿರುವಾದಿರ ಮತ್ತು ಮೊಹಿಣಿಯಾಟ್ಟಂ ಪ್ರದರ್ಶನ, ಯುವ ಪೀಳಿಗೆಯ ಫ್ಯಾಷನ್​ ಶೋ, ಸಂಗೀತ, ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಹೊರಾಂಗಣ ಕ್ರೀಡೆ, ಸಂಗೀತ, ಮನರಂಜನೆಗಳಲ್ಲಿ ಸಮಾಜಿಗರು ಸಂಭ್ರಮಿಸಿದರು.
"

ಕೇರಳದಿಂದ ಇಲ್ಲಿಗೆ ಬಂದು ನೆಲೆಸಿರುವ ಮಲಯಾಳಿ ಸಮುದಾಯದವರು ತಮ್ಮ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ವೈವಿಧ್ಯಗಳನ್ನು ಉಡುಪಿಯಲ್ಲಿ ಅನಾವರಣ ಮಾಡಿದ್ದಾರೆ. ನಿಮ್ಮ ಓಣಂ ಸಂಭ್ರಮ, ವಿಶೇಷತೆ, ಕೇರಳದ ಸಾಂಸ್ಕೃತಿಕ ಶ್ರೀಮಂತಿಕೆ ಕಣ್ತುಂಬಿಕೊಳ್ಳಲು ಉಡುಪಿ ಜನತೆಗೆ ಸದವಕಾಶವಾಗಿದೆ.