ಭಾನುವಾರ (ಜು.26) 'ಸುವರ್ಣ ಮಂಟಪಸ್ಥ ರತ್ನಕೃಷ್ಣ' ಅಲಂಕಾರದಲ್ಲಿ ಉಡುಪಿ ಶ್ರೀಕೃಷ್ಣ. 
ಉಡುಪಿ

ಉಡುಪಿಯಲ್ಲಿ 'ಜಗದೊಡೆಯನ ಜನ್ಮಾಷ್ಟಮಿ' ಸಂಭ್ರಮ

* ಪರ್ಯಾಯ ಶೀರೂರು ಮಠದಿಂದ ಆಯೋಜನೆ

* ಆ.1ರಿಂದ ಸೆ.6ರ ವರಗೆ ವಿವಿಧ ಸ್ಪರ್ಧೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿ ಮಠದಲ್ಲಿ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಒಂದು ತಿಂಗಳ ಪರ್ಯಂತ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.1ರಿಂದ ಸೆ.6ರ ವರೆಗೆ ಮಧ್ವ ಮಂಟಪ, ರಾಜಾಂಗಣ, ಮಧ್ವಾಂಗಣ, ಕನಕ ಮಂಟಪ ಹಾಗೂ ರಥಬೀದಿಯಲ್ಲಿ 'ಜಗದೊಡೆಯನ ಜನ್ಮಾಷ್ಟಮಿ' ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.
ವೇದವರ್ಧನ ತೀರ್ಥ ಶ್ರೀಪಾದ.
ಸಂಗೀತ ಸ್ಪರ್ಧೆ (ದಾಸರ ಪದ), ಕೃಷ್ಣನಿಗೆ ಸಂಬಂಧಿಸಿ ಚಿತ್ರಕಲಾ ಸ್ಪರ್ಧೆ, ಚುಕ್ಕೆ ರಂಗವಲ್ಲಿ, ಸಾಂಪ್ರದಾಯಿಕ ಕ್ರೀಡೆ, ಕಪ್ಪೆ ಜಿಗಿತ, ಗೋಣಿ ಜಿಗಿತ, ಬೆರ್ಚೆಂಡು, ಹಗ್ಗಜಗ್ಗಾಟ, ಸೊಪ್ಪಿನ ಆಟ, ಪ್ರಬಂಧ ಸ್ಪರ್ಧೆ, ಹುಲಿ ವೇಷ ಕುಣಿತ ಸ್ಪರ್ಧೆ, ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ, ಮೊಸರು ಕಡೆಯುವ ಸ್ಪರ್ಧೆ, ಶಂಖ ಊದುವ ಸ್ಪರ್ಧೆ, ಕಬಡ್ಡಿ ಸ್ಪರ್ಧೆ (ಮಠದ ಸಿಬ್ಬಂದಿಗೆ ಮಾತ್ರ), ಹೂ ಕಟ್ಟುವ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಮಡಕೆಗೆ ಚಿತ್ತಾರ ಸ್ಪರ್ಧೆ, ಮುದ್ದುಕೃಷ್ಣ ವೇಷ ಸ್ಪರ್ಧೆ, ಹುಲಿ ವೇಷ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಸೆ.6ರಂದು ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ಬಹುಮಾನ ವಿತರಣೆ ಹಾಗೂ 'ಜಗದೊಡೆಯನ ಜನ್ಮಾಷ್ಟಮಿ' ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪರ್ಧಾಳುಗಳು ಆಯಾ ವಿಭಾಗಕ್ಕೆ ತಮ್ಮ ಹೆಸರುಗಳನ್ನು ಬಡಗು ಮಾಳಿಗೆ ಕಚೇರಿಯಲ್ಲಿ ಅಥವಾ ಸೂಚಿತ ಮೊಬೈಲ್​ ನಂಬರ್​ಗೆ ಸ್ಪರ್ಧೆಯ ಹಿಂದಿನ ದಿನ ಸಂಜೆ 6 ಗಂಟೆಯ ಒಳಗೆ ನೋಂದಾಯಿಸಬೇಕು ಎಂದು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ತಿಳಿಸಿದ್ದಾರೆ.
ಹುಲಿವೇಷ ಪ್ರಥಮ ಬಹುಮಾನ 1 ಲಕ್ಷ ರೂ.
ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ. ವ್ಯಕ್ತಿಗತ ಸ್ಪರ್ಧೆಯಲ್ಲಿ ಪ್ರಥಮ 2 ಸಾವಿರ ರೂ., ದ್ವಿತೀಯ 1,500 ರೂ., ತೃತೀಯ 1 ಸಾವಿರ ರೂ. ಹುಲಿ ವೇಷ ಸ್ಪರ್ಧೆಗೆ ಪ್ರಥಮ 1 ಲಕ್ಷ ರೂ. ದ್ವಿತೀಯ 75 ಸಾವಿರ ರೂ. ತೃತೀಯ 50 ಸಾವಿರ ರೂ. ಜಾನಪದ ಸ್ಪರ್ಧೆಯಲ್ಲಿ ಪ್ರಥಮ 10 ಸಾವಿರ ರೂ., ದ್ವಿತೀಯ 7 ಸಾವಿರ ರೂ., ತೃತೀಯ 5 ಸಾವಿರ ರೂ. ಬಹುಮಾನ ಇರಲಿದೆ. ಮಾಹಿತಿಗಾಗಿ 0820-2520598, ಮೊ.ಸಂ. 9741257830 ಸಂಪರ್ಕಿಸಬಹುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.