ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಷಾಡ ಶಯನಿ ಏಕಾದಶಿ ನಿಮಿತ್ತ ಶೀರೂರು ವೇದವರ್ಧನ ಶ್ರೀಗಳು ಭಕ್ತರಿಗೆ ಶಂಕ, ಚಕ್ರದ ತಪ್ತಮುದ್ರಾ ಧಾರಣೆ ನೆರವೇರಿಸಿದರು. 
ಉಡುಪಿ

ವಿಷ್ಣು ಭಕ್ತಿಗಾಗಿ ತಪ್ತಮುದ್ರಾ ಧಾರಣೆ

* ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುದರ್ಶನ ಹೋಮ

* ಶೀರೂರು ಶ್ರೀಗಳಿಂದ ಚಾತುರ್ಮಾಸ್ಯ ವ್ರತಕ್ಕೆ ನಾಂದಿ

ಉಡುಪಿ: ಆಷಾಡ ಶಯನಿ ಪ್ರಥಮ ಏಕಾದಶಿ ನಿಮಿತ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶನಿವಾರ (ಜು.25) ಪರ್ಯಾಯ ವೇದವರ್ಧನ ತೀರ್ಥ ಶ್ರೀಪಾದರು ಸ್ಮೃತಿಯುಕ್ತ ಶಾಸ್ತ್ರದಂತೆ ಸುದರ್ಶನ ಹೋಮ ನಡೆಸಿದರು.
ಹೋಮದ ಅಗ್ನಿಯಲ್ಲಿ ಚಕ್ರ ಮತ್ತು ಶಂಖದ ಮುದ್ರೆಯನ್ನು ಬಿಸಿ ಮಾಡಿ ಮೊದಲಿಗೆ ಸ್ವಯಂ ಮುದ್ರಾಂಕ ಮಾಡಿಕೊಂಡರು. ನಂತರ ಮಧ್ವ ಸಂಪ್ರದಾಯದ ಭಕ್ತರಿಗೆ ಹಾಗೂ ಶಿಷ್ಯರಿಗೆ ಮುದ್ರಾಧಾರಣೆ ಕಾರ್ಯ ನೆರವೇರಿಸಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಷಾಡ ಶಯನಿ ಏಕಾದಶಿ ನಿಮಿತ್ತ ಶೀರೂರು ವೇದವರ್ಧನ ಶ್ರೀಗಳು ಸುದರ್ಶನ ಹೋಮ ನೆರವೇರಿಸಿದರು. 
ವಿಷ್ಣುವಿನ ಯೋಗ ನಿದ್ರೆ
ವಾರ್ಷಿಕವಾಗಿ ಬರುವ ಆಷಾಢ ಮಾಸದಲ್ಲಿ ಭಗವಾನ್​ ವಿಷ್ಣುವು ಯೋಗ ನಿದ್ರೆಗೆ ಜಾರುತ್ತಾನೆ. ಹೀಗಾಗಿ ಈ ದಿನವನ್ನು ಆಷಾಢ ಶಯನಿ ಎಂದು ಕರೆಯಲಾಗುತ್ತದೆ. ಏಕಾದಶಿಯಿಂದ ಆರಂಭಿಸಿ ಮುಂದಿನ 4 ತಿಂಗಳು ವಿಷ್ಣುವು ನಿದ್ರಾವಸ್ಥೆಯಲ್ಲಿ ಇರುತ್ತಾನೆ. ಹೀಗಾಗಿ ಆತನ ಸ್ಮರಣೆ, ಆರಾಧನೆಗಾಗಿ ಮುದ್ರಾಧಾರಣೆ ಮಾಡಿಕೊಳ್ಳುವ,  ಚಾತುರ್ಮಾಸ್ಯ ವ್ರತ ಆರಂಭಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಆರೋಗ್ಯಕ್ಕೂ ಪೂರಕ

ಮುಖ್ಯವಾಗಿ ವಿಷ್ಣು ಭಕ್ತಿಗಾಗಿ ಈ ಆಚರಣೆಯಿದೆ. ವೈಷ್ಣವ ದೀಕ್ಷೆಯ ಪ್ರಧಾನ ಭಾಗವೂ ಇದಾಗಿದೆ. ತಪ್ತ ಎಂದು ಬಿಸಿ ಎಂದರ್ಥ. ಶಂಖ ಹಾಗೂ ಚಕ್ರ ಇರುವ ಮುದ್ರೆಯನ್ನು ಬೆಂಕಿಯ ಕೆಂಡದಲ್ಲಿ ಹದವಾಗಿ ಕಾಯಿಸಿ ಧಾರಣೆ ಮಾಡಿಕೊಳ್ಳುವುದು ಆರೋಗ್ಯಕ್ಕೂ ಪೂರಕ. ನರದೌರ್ಬಲ್ಯಕ್ಕೂ ಒಳಿತು ಎನ್ನುವುದು ಸಂಶೋಧನೆಯಿಂದಲೂ ತಿಳಿದುಬರುತ್ತದೆ. 
ಭಕ್ತಿಗೆ ಪ್ರೇರಕ
ತಪ್ತಮುದ್ರಾ ಧಾರಣೆ ಇತ್ತೀಚೆಗೆ ಆರಂಭಗೊಂಡ ಸಂಪ್ರದಾಯವಲ್ಲ. ಅದು ದ್ವಾಪರಯುಗದಲ್ಲೇ ಇತ್ತು. ಶಂಖ&ಚಕ್ರ ಮುದ್ರೆ ಧರಿಸಿದವರಿಗೆ ಮಾತ್ರ ದ್ವಾರಕೆಗೆ ಪ್ರವೇಶವಿತ್ತು ಎಂಬ ಉಲ್ಲೇಖ ಮಹಾಭಾರತದಲ್ಲಿ ಲಭಿಸುತ್ತಿದೆ. ಮಧ್ವಾಚಾರ್ಯರರು ಅದನ್ನು ಪ್ರಚುರಪಡಿಸಿದರು. ಮುದ್ರಾ ಧಾರಣೆಯಿಂದ ನಿತ್ಯವೂ ಭಗವಂತನ ಸ್ಮರಣೆ ಮಾಡಿಸುವಲ್ಲಿ ಪ್ರೇರಕವಾಗಿರುತ್ತದೆ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಮಾಹಿತಿ ನೀಡಿದರು.
"

ಆಷಾಢ ಮಾಸ ಮಳೆಗಾಲದ ದಿನವಾಗಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಬೇಸಿಗೆಯಲ್ಲಿ ನಿರ್ಜೀವವಾಗಿದ್ದ ಕ್ರಿಮಿಕೀಟಗಳಿಗೆಲ್ಲ ಜೀವಬಂದು ವಿವಿಧ ರೋಗ-ರುಜಿನಗಳಿಗೂ ಕಾರಣವಾಗುತ್ತದೆ. ಪೂರ್ವಜರೆಲ್ಲ ಹಿಂದೆ ಸಾಂಕ್ರಾಮಿಕ ರೋಗ ತಡೆಯಲು ಕಬ್ಬಿಣದ ಸಲಾಕೆ ಕಾಯಿಸಿ ಕಾಲಿನ ಅಡಿಭಾಗದಲ್ಲಿ ಹದವಾಗಿ ಇಡುತ್ತಿದ್ದರು. ಅದೊಂದು ಆರೋಗ್ಯ ರಕ್ಷಣೆಯ ಪದ್ಧತಿಯಾಗಿತ್ತು. ಭಗವಂತನ ದಿವ್ಯವಾದ ಅಂಶಗಳೂ ಸಹ ದೇಹದಲ್ಲಿರಬೇಕೆಂಬ ಕಾರಣಕ್ಕೆ ಆಷಾಡ ಏಕಾದಶಿಯಂದು ವಿಷ್ಣುವಿನ ಆಯುಧವಾದ ಶಂಕ-ಚಕ್ರದ ತಪ್ತಮುದ್ರಾ ಧಾರಣೆ ಮಾಡುವ ಕ್ರಮವಿದೆ.

— ವೇದವರ್ಧನ ತೀರ್ಥ ಶ್ರೀಪಾದರು. ಪರ್ಯಾಯ ಶೀರೂರು ಮಠ.