ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಯಿತು. ಪ್ರೊ. ಎಂ.ಎಲ್. ಸಾಮಗ, ಪ್ರೊ. ಸುರೇಂದ್ರನಾಥ ಶೆಟ್ಟಿ, ಪ್ರೊ. ಅರವಿಂದ ಹೆಬ್ಬಾರ್, ಗೋಪಾಲ್ ರಾವ್, ಯಶೋದಾ ರಾವ್, ಕೋಮಲಾ, ಬಾಲಕೃಷ್ಣ ಶೆಟ್ಟಿ, ಯು.ಕಲ್ಯಾಣಿ ಪೈ ಇತರರಿದ್ದರು.
* ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಅನಿಸಿಕೆ
* ಉಡುಪಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ
ಉಡುಪಿ: ಹಳೆಯ ಸ್ನೇಹಿತರೊಂದಿಗೆ ಒಗ್ಗೂಡುವಿಕೆಯಿಂದ ಬದುಕು ಹಗುರವಾಗುತ್ತದೆ. ದೇಹ-ಮನದೊಳಗೆ ಗಟ್ಟಿಯಾಗಿರುವ ಒತ್ತಡವೂ ಒಂದಿಷ್ಟು ದೂರವಾಗುತ್ತದೆ. ಪ್ರಮುಖವಾಗಿ ಸ್ನೇಹ ಅಥವಾ ಗೆಳೆತನದ ಬಾಂಧವ್ಯ ಇನ್ನಷ್ಟು ವೃದ್ಧಿಯಾಗುತ್ತದೆ. ಇಂತಹ ಸಮ್ಮಿಲನ ಮುಂದುವರಿಯಬೇಕು. ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಬಂಧ ಮುಂದುವರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ತಿಳಿಸಿದರು.
ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಎಂಜಿಎಂ ಕಾಲೇಜಿನ 1973ರ ಬಿಎ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳ 5ನೇ ಪುನರ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ, ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್ ಅವರು ಉಪನ್ಯಾಸ ವೃತ್ತಿಯ ರಸಾನುಭವ ಹಾಗೂ ಹಳೆಯ ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮಗಾದ ಅನುಭವ ಹಂಚಿಕೊಂಡರು.
ಸಂಸ್ಥಾಪಕ ಗೋಪಾಲ್ ರಾವ್, ಯಶೋದಾ ರಾವ್, ಕೋಮಲಾ, ಬಾಲಕೃಷ್ಣ ಶೆಟ್ಟಿ ಇತರರು ಉಪಸ್ಥಿತರಿದ್ದರು. ಹಳೆಯ ವಿದ್ಯಾರ್ಥಿನಿ ಯು.ಕಲ್ಯಾಣಿ ಪೈ ಕಾರ್ಯಕ್ರಮ ನಿರೂಪಿಸಿದರು. ಹಳೆಯ ವಿದ್ಯಾರ್ಥಿಗಳಿಂದ ವಿನೋದಾವಳಿ, ಪ್ರತಿಭಾ ಪ್ರದರ್ಶನ ನಡೆಯಿತು.