ಗಂಗೊಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಗ್ರಾಮಸಭೆ ಗಂಗೊಳ್ಳಿಯ ಶ್ರೀ ವೀರೇಶ್ವರ ವಾಂಗಲ್ಯ ಮಂದಿರದಲ್ಲಿ ಬುಧವಾರ ನಡೆಯಿತು.
ವಿಚಾರ ಪ್ರಸ್ತಾಪಿಸಿದ ನವೀನ್ ಗಂಗೊಳ್ಳಿ, ರಾವೇಂದ್ರ ಗಾಣಿಗ, ವೆಂಕಟೇಶ, ನವೀನ್ ಅವರು, ಗ್ರಾಮದಲ್ಲಿ 9/11, ಜಲಜೀವನ್ ಮಿಷನ್, ಕಳಪೆ ಕಾಮಗಾರಿಗಳು, ಪಿಡಬ್ಲ್ಯುಡಿ ರಸ್ತೆ ಅತಿಕ್ರಮಣ ಸಹಿತ ಅನೇಕ ಸಮಸ್ಯೆಗಳಿದ್ದು, ಈ ಕುರಿತು ಗ್ರಾಮಸ್ಥರು ವಿಚಾರಿಸಬಹುದೆಂದು ಮೊದಲೇ ಊಹಿಸಿದ್ದ ಅಧಿಕಾರಿಗಳು ಗ್ರಾಮಸಭೆಗೆ ಗೈರಾಗಿದ್ದಾರೆ. ಅಧಿಕಾರಿಗಳಿಗೆ ಗ್ರಾಮಗಳ ಅಭಿವೃದ್ಧಿ ಅಗತ್ಯವಿಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಮಾತಿಗೆ ಗ್ರಾ.ಪ. ಅಧ್ಯಕ್ಷೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಅಧ್ಯಕ್ಷೆ ಹಾಗೂ ಗ್ರಾಮಸ್ಥರ ನಡುವೆ ವಾಕ್ಸಮರ ನಡೆಯಿತು. ಅಧ್ಯಕ್ಷರ ನಡೆ ವಿರೋಧಿಸಿ ಗ್ರಾಮಸ್ಥರಾದ ನವೀನ್ ಗಂಗೊಳ್ಳಿ, ರಾವೇಂದ್ರ ಗಾಣಿಗ, ವೆಂಕಟೇಶ, ನವೀನ್, ಅಶೋಕ್ ಪೂಜಾರಿ, ಮೋಹನ ಖಾರ್ವಿ ಸ್ಥಳದಲ್ಲೇ ಧರಣಿ ನಡೆಸಿದರು.
ಕಾಮಗಾರಿ ಪರಿಶೀಲಿಸಲಿ
ಗ್ರಾಮಸ್ಥರಾದ ನವೀನ್ ಗಂಗೊಳ್ಳಿ ಹಾಗೂ ಬಿ.ರಾವೇಂದ್ರ ಪೈ ಮಾತನಾಡಿ, ಮಳೆಗಾಲದಲ್ಲಿ ಚರಂಡಿ ಅವ್ಯವಸ್ಥೆ ಹಾಗೂ ಜೆಸಿಬಿಯಿಂದ ಚರಂಡಿ ನಿರ್ಮಿಸುತ್ತಿರುವುದು ವಿಪರ್ಯಾಸ. ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ಅಂದಾಜುಪಟ್ಟಿ ಸಿದ್ಧಪಡಿಸಿ ಬಳಿಕ ಕಾಮಗಾರಿ ನಡೆಯುವ ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಿಲ್ಲ. ಬಹುತೇಕ ಕಾಮಗಾರಿಗಳೆಲ್ಲವೂ ಕಳಪೆಯಾಗಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಪ್ರತೀ ಕಾಮಗಾರಿ ಪರಿಶೀಲನೆಯಾಗಬೇಕು ಎಂದು ಆಗ್ರಹಿಸಿದರು.
ಜ.1ರಿಂದ ತ್ಯಾಜ್ಯ ಸಂಗ್ರಹ?
ವೀರೇಶ್ವರ ದೇವಸ್ಥಾನದ ಕೆರೆಗೆ ನಿರ್ಮಿಸಲಾದ ತಾತ್ಕಾಲಿಕ ಬೇಲಿ ರಚನೆ ಹಾಗೂ ಸುರೇಶ ಖಾರ್ವಿ ಅವರ ಮನೆ ಸಮೀಪ ನಿರ್ಮಾಣವಾದ ಚರಂಡಿ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಎರಡು ತಿಂಗಳಿನಿಂದ ತ್ಯಾಜ್ಯ ಸಂಗ್ರಹ ಸ್ಥಗಿತಗೊಂಡಿರುವುದರ ಬಗ್ಗೆ ಸಭೆಯಲ್ಲಿ ಸಾರ್ವಜನಿಕರು ಅಸವಾಧಾನ ವ್ಯಕ್ತಪಡಿಸಿದರು. ಜ.1ರಿಂದ ತ್ಯಾಜ್ಯ ಸಂಗ್ರಹ ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಿಡಿಒ ರವಿ ಮಾಹಿತಿ ನೀಡಿದರು.
ಬೀದಿ ನಾಯಿಗಳಿಗೆ ಲಸಿಕೆ
ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸರ್ಕಾರಿ ಭೂಮಿಗಳ ಅತಿಕ್ರಮಣಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಅಂತಹ ಭೂಮಿಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಕುಂದಾಪುರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಆಶಾ ನೋಡಲ್ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ಸದಸ್ಯರು, ಪಶು ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ., ಗಂಗೊಳ್ಳಿ ಮೆಸ್ಕಾಂ ಶಾಖಾಧಿಕಾರಿ ದಿನೇಶ ಕುವಾರ್ ಶೆಟ್ಟಿ, ಸಿಆರ್‌ಪಿ ಮಹೇಶ್, ಸಿಎಚ್‌ಒ ನಯನಾ ತಾಂಡೇಲ್, ಅಂಗನವಾಡಿ ಮೇಲ್ವಿಚಾರಕಿ ರೇಖಾ ಕೆ., ಗ್ರಾಮ ಆಡಳಿತ ಅಧಿಕಾರಿ ಶಿವರಾಯ, ಬಂದರು ಇಲಾಖೆಯ ಪ್ರಕಾಶ್, ಅಂಕುಶ್ ನಾಯ್ಕ, ಕಾರ್ಯದರ್ಶಿ ಅನುಪ್ ಶೇಟ್, ಪಿಡಬ್ಲ್ಯುಡಿ ಇಂಜಿನಿಯರ್ ಮೂರ್ತಿ ಉಪಸ್ಥಿತರಿದ್ದರು.
ಪಿಡಿಒ ರವಿ ಸ್ವಾಗತಿಸಿದರು. ಚೈತ್ರಾ ವರದಿ ಮಂಡಿಸಿದರು. ಭಾಗ್ಯಾ ಆಯವ್ಯಯ ಪಟ್ಟಿ ವಾಚಿಸಿದರು. ಸಂದೀಪ ಖಾರ್ವಿ ಅನುಪಾಲನಾ ವರದಿ ವಾಚಿಸಿದರು. ನಾರಾಯಣ ಶ್ಯಾನುಭಾಗ್ ನಿರೂಪಿಸಿದರು.
ಸಭೆಯಲ್ಲಿ ವಾಕ್ಸಮರ
ಕೋರಂ ಅಭಾವ, ಅಧಿಕಾರಿಗಳ ಗೈರು, ಕಳಪೆ ಕಾಮಗಾರಿಗಳು, ಮಳೆಗಾಲದ ಸಮಸ್ಯೆಗಳು, ಎಸ್‌ಎಲ್‌ಆರ್‌ಎಂ ಟಕದ ಸಮಸ್ಯೆ, ಸರ್ಕಾರಿ ಭೂಮಿ ಅತಿಕ್ರಮಣ, ಚರಂಡಿ ಮತ್ತಿತರ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆದು ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರ ನಡುವೆ ವಾಕ್ಸಮರ ನಡೆಯಿತು.
ಬ್ಯಾಂಕ್ ಶಾಖಾ ಪ್ರಬಂಧಕರಿಗೆ ಸನ್ಮಾನ
ಕೆನರಾ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಗಂಗೊಳ್ಳಿ ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಕಾರ್ಯಕ್ಕಾಗಿ ಎರಡು ವಾಹನವನ್ನು ಕೊಡುಗೆಯಾಗಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಗುಜ್ಜಾಡಿ ಶಾಖೆಯ ಹಿರಿಯ ಶಾಖಾ ಪ್ರಬಂಧಕ ವಾಸು ದೇವಾಡಿಗ ಅವರನ್ನು ಗೌರವಿಸಲಾಯಿತು.