ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆಯಿತು. ಪ್ರವೀಣ್ ಕೆ., ಡಾ.ಅನ್ಸಿಲಾ, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೈಲೊಟ್ಟು ಪಂಜಿನಡ್ಕ ರಸ್ತೆ ಅಭಿವೃದ್ಧಿ, ವಿದ್ಯುತ್ ಕಣ್ಣಾಮುಚ್ಚಾಲೆ, ವಿವಿಧ ಇಲಾಖೆಗಳ ಸಮನ್ವಯತೆಯ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಅತಿಕಾರಿಬೆಟ್ಟು ಗ್ರಾಪಂ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ನಡೆಯಿತು.
ಪಂಚಾಯಿತಿ ಆಡಳಿತ ಅಧಿಕಾರಿ ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪಿಡಿಒ ಶೈಲಜಾ, ಮೈಲೊಟ್ಟು ಪಂಜಿನಡ್ಕ ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 30 ಲಕ್ಷ ರೂ. ಮೀಸಲಿಡಲಾಗಿದ್ದು, ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಕಳೆದ ಸಾಲಿನ ಬೇಡಿಕೆಗಳ ವಿವರ ನೀಡುವಾಗ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರುಹಾಜರಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ ವರ್ಷದ ಕಾಮಗಾರಿಗಳು ಎಷ್ಟು ಅನುಷ್ಠಾನಗೊಂಡಿವೆ ಎಂಬ ಸಂಪೂರ್ಣ ವಿವರ ನೀಡುವಂತೆ ವಕೀಲ ರವೀಶ್ ಕಾಮತ್ ಆಗ್ರಹಿಸಿದರು.
ಮೆಸ್ಕಾಂ ಕಾಲೆಳೆದ ಕೃಷಿಕ!
ಶಿಮಂತೂರು ಪರಿಸರದಲ್ಲಿ ಪ್ರತಿದಿನ ನಡೆಯುತ್ತಿರುವ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಹೈರಾಣಾಗಿದ್ದಾರೆ ಎಂದು ಕಿಶೋರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಧ್ವನಿಗೂಡಿಸಿದ ಕೃಷಿಕ ಹರೀಶ್ ಶೆಟ್ಟಿ, ಮೆಸ್ಕಾಂಗೆ ಫೋನ್ ಮಾಡಿ ದೂರು ನೀಡಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಆದರೆ ಮೊಬೈಲ್‌ಗೆ ಮಾತ್ರ ನಿಮ್ಮ ಸಮಸ್ಯೆ ಕ್ಲಿಯರ್ ಆಗಿದೆ, ಧನ್ಯವಾದಗಳು ಎಂಬ ಸಂದೇಶ ಬರುತ್ತದೆ. ಇಲಾಖೆಗೆ ಗ್ರಾಹಕರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯವೇಕೆ? ಎಂದು ತರಾಟೆಗೆ ತೆಗೆದುಕೊಂಡರು. ಕೊಲಕಾಡಿ ರೈಲ್ವೆ ಗೇಟ್ ಬಳಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ಪದೇಪದೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ತಕ್ಷಣ ಸರಿಪಡಿಸುವಂತೆ ಗೋಪಾಲ ಒತ್ತಾಯಿಸಿದರು.
ತೋಟಗಾರಿಕಾ ಇಲಾಖೆಯ ಪ್ರವೀಣ್ ಕೆ. ನೋಡಲ್ ಅಧಿಕಾರಿಯಾಗಿದ್ದರು. ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನ್ಸಿಲಾ, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ರಾಮಸ್ಥರಾದ ಸಾಧು ಅಂಚನ್ ಮಟ್ಟು, ಶಶಿಧರ್ ಶೆಟ್ಟಿ ಮತ್ತಿತರರು ಮಾತನಾಡಿದರು.
ಮಟ್ಟು ರಸ್ತೆ ಕಾಮಗಾರಿ ಕಳಪೆ
ಕೆಆರ್‌ಡಿಎಲ್ ವತಿಯಿಂದ ನಡೆದ ಮಟ್ಟು ರಸ್ತೆಯ ಕಾಂಕ್ರಿಟೀಕರಣ ತೀರಾ ಕಳಪೆಯಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದರೂ ಸರಿಯಾದ ದುರಸ್ತಿ ನಡೆದಿಲ್ಲ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪ್ರಖ್ಯಾತ್ ಶೆಟ್ಟಿ ಆಗ್ರಹಿಸಿದರು. ಮಟ್ಟುವಿನಲ್ಲಿ ವಾರ್ಡ್ ಸಭೆ ನಡೆಸದ ಕುರಿತು ದಯಾನಂದ ಮಟ್ಟು ಆಕ್ಷೇಪವೆತ್ತಿ, ಪಂಚಾಯಿತಿಯಲ್ಲಿ ಕೇವಲ ಉಳ್ಳವರಿಗೆ ಮತ್ತು ಲ್ಯಾಂಡ್ ಬ್ರೋಕರ್‌ಗಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಪಂಚಾಯಿತಿ ಕಟ್ಟಡಗಳು ಶಿಥಿಲಗೊಂಡಿದ್ದು, ಆಯುಷ್ಮಾನ್ ಆಸ್ಪತ್ರೆ ಮುಚ್ಚುವ ಸ್ಥಿತಿಯಲ್ಲಿದೆ ಎಂದು ರವೀಶ್ ಕಾಮತ್ ಬೇಸರ ವ್ಯಕ್ತಪಡಿಸಿದರು.
ಸೈಬರ್ ವಂಚನೆ ನಿಯಂತ್ರಣದಲ್ಲಿದೆ
ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸಂದೀಪ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಮಕ್ಕಳು ಸಾಮಾಜಿಕ ಜಾಲತಾಣ ಬಳಸುವಾಗ ಪೋಷಕರು ಜಾಗೃತಿ ವಹಿಸಬೇಕು. ಗಾಂಜಾ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಎಂದರು.
ಪ್ರಮುಖ ಬೇಡಿಕೆಗಳು
* ಕಲ್ಲಗುಡ್ಡೆ ಗ್ರಾಮಸ್ಥರಿಗೆ ಸಮರ್ಪಕ ರಸ್ತೆ ವ್ಯವಸ್ಥೆ ಕಲ್ಪಿಸಬೇಕು.
* ಮೂಲ್ಕಿಯ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿಯನ್ನು ತಕ್ಷಣ ನೇಮಿಸಬೇಕು.
* ಮೈಲೊಟ್ಟು - ಮಟ್ಟು ಭಾಗಕ್ಕೆ ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಬೇಕು.
* ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು.
* ಮಟ್ಟು ಹೊಸಕೊಪ್ಪಲ ಅಣೆಕಟ್ಟುವಿಗೆ ನೂತನ ಹಲಗೆಗಳನ್ನು ಅಳವಡಿಸಬೇಕು.
* ಕಕ್ವ ಸರ್ಕಾರಿ ಶಾಲೆಯ ದುರಸ್ತಿ ಹಾಗೂ ಕೃಷಿಗೆ ಅಗತ್ಯವಿರುವ ಸುಣ್ಣದ ವ್ಯವಸ್ಥೆ ಮಾಡಬೇಕು.
* ಪ್ರಮುಖ ಕೇಂದ್ರವಾದ ಮೈಲೊಟ್ಟಿನಲ್ಲಿ ಪ್ರಯಾಣಿಕರು ಮಳೆಯಲ್ಲಿ ಪರದಾಡುತ್ತಿದ್ದು, ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಬೇಕು ಹಾಗೂ ಹೊಂಡ ಬಿದ್ದಿರುವ ರೈಲ್ವೆ ಗೇಟ್ ರಸ್ತೆಯನ್ನು ದುರಸ್ತಿಗೊಳಿಸಬೇಕು.
ಮೂಲ್ಕಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ನಾಗರಿಕ ದೀಕ್ಷಿತ್ ದೂರಿದರು. ನನ್ನ ಮಗುವಿನ ತುರ್ತು ಚಿಕಿತ್ಸೆಗೆ ಹೋದಾಗ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇರಲಿಲ್ಲ. ಕೊನೆಗೆ ಬಜ್ಪೆೆಯಿಂದ ಆಂಬುಲೆನ್ಸ್ ಬರುವವರೆಗೆ ಕಾಯಬೇಕಾಯಿತು. ತುರ್ತು ಸಂದರ್ಭದಲ್ಲಿ ಪ್ರಾಣಾಪಾಯವಾದರೆ ಯಾರು ಹೊಣೆ? ಎಂದು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ದಿನೇಶ್ಚಂದ್ರ ಅಜಿಲ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ವೈದ್ಯರ ಚೀಟಿ ಹಿಡಿದು ಖಾಸಗಿ ಮೆಡಿಕಲ್‌ಗಳಲ್ಲಿ ಔಷಧ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಈ ಬಗ್ಗೆ ಆರೋಗ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.