ಕುಂಬಳೆ ಬಸ್ ನಿಲ್ದಾಣ. 
ಉಡುಪಿ

ಕುಂಬಳೆ ಸಂಚಾರ ಸುಧಾರಣೆಗೆ ವಿಘ್ನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂಬಳೆ

ಕುಂಬಳೆ ಪೇಟೆಯಲ್ಲಿ ಪಂಚಾಯಿತಿ ಆಡಳಿತ ಸಮಿತಿ ನಿರ್ಧರಿಸಿದ ಸಂಚಾರ ಸುಧಾರಣಾ ಕ್ರಮ ಜಾರಿಗೆ ತರುವಲ್ಲಿ ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ(ಎಂವಿಡಿ) ಸಹಕರಿಸುತ್ತಿಲ್ಲ ಎಂಬ ಆರೋಪವಿದೆ.
ನಗರದಲ್ಲಿ ಖಾಸಗಿ ಬಸ್ ನೌಕರರು ಮುಖ್ಯವಾಗಿ ಈ ಸಂಚಾರ ಸುಧಾರಣೆ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಕುಂಬಳೆಯಲ್ಲಿ ಆಟೋರಿಕ್ಷಾ ಚಾಲಕರ ಬೆಂಬಲವೂ ಇದೆ. ಹೀಗೆ ಎರಡು ಧ್ರುವಗಳ ರೀತಿ ಎರಡೂ ಪಕ್ಷಗಳು ವರ್ತಿಸುತ್ತಿರುವುದರಿಂದ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮತ್ತು ಎಂವಿಡಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಪ್ರಯಾಣಿಕರ ಆರೋಪ.
ಕುಂಬಳೆ ಗ್ರಾಪಂ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಹಾಜಿ ನೇತೃತ್ವದ ಆಡಳಿತ ಸಮಿತಿ ಸದಸ್ಯರು ಅಸಮರ್ಪಕ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಇದೀಗ ದೊಡ್ಡ ಚರ್ಚೆಯಾಗಿದೆ.
ಸಂಚಾರ ಸುಧಾರಣೆಗಳನ್ನು ತಕ್ಷಣ ಜಾರಿಗೆ ತರಬೇಕೆಂದು ವ್ಯಾಪಾರಿಗಳು ಮತ್ತು ವ್ಯಾಪಾರ ಯುವ ಘಟಕ ಬಲವಾಗಿ ಒತ್ತಾಯಿಸುತ್ತಿದೆ. ಕೆಲವು ದಿನಗಳ ಹಿಂದೆ, ಕುಂಬಳೆ ಗ್ರಾಪಂ ಕಚೇರಿಯಲ್ಲಿ ಮೆರವಣಿಗೆ ಮತ್ತು ಧರಣಿ ಆಯೋಜಿಸಲಾಗಿತ್ತು. ಪಂಚಾಯಿತಿ ಆಡಳಿತ ಸಮಿತಿ ದೂರಿನ ನಂತರ ಗೃಹ ಸಚಿವ ರಮೇಶ್ ಚೆನ್ನಿತ್ತಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಇಲ್ಲಿವರೆಗೆ ಯಾವುದೇ ಬದಲಾವಣೆಯಾಗಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ, ವ್ಯಾಪಾರಿಗಳು ಮತ್ತು ವ್ಯಾಪಾರ ಯುವ ಘಟಕದ ಮುಖಂಡರು ಪೊಲೀಸ್ ಠಾಣೆ ಮೆರವಣಿಗೆ ಸೇರಿದಂತೆ ಪ್ರಬಲ ಪ್ರತಿಭಟನಾ ಕಾರ್ಯಕ್ರಮ ಪ್ರಾರಂಭಿಸಲು ನಿರ್ಧರಿಸಿದ್ದಾರೆ.

ಪ್ರಯಾಣಿಕರನ್ನು ಕಷ್ಟಕ್ಕೆ ದೂಡುವ ಖಾಸಗಿ ಬಸ್‌ಗಳು

ಖಾಸಗಿ ಬಸ್‌ಗಳು ಹಳೇ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಲು ಮತ್ತು ಕರೆದೊಯ್ಯಲು ಕ್ರಮ ಕೈಗೊಳ್ಳಬೇಕು ಎಂಬುದು ವ್ಯಾಪಾರಿಗಳು ಮತ್ತು ಪ್ರಯಾಣಿಕರ ಪ್ರಮುಖ ಬೇಡಿಕೆಯಾಗಿದೆ. ಆದರೆ ಖಾಸಗಿ ಬಸ್ ನೌಕರರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕೆಎಸ್ಸಾರ್ಟಿಸಿ ಲಿಮಿಟೆಡ್ ಬಸ್‌ಗಳು ಬದಿಯಡ್ಕ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬಸ್ ಶೆಲ್ಟರ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದನ್ನು ವ್ಯಾಪಾರಿಗಳು ಪ್ರಶ್ನಿಸುತ್ತಿಲ್ಲ.
ಆದರೆ ದೊಡ್ಡ ಪ್ರತಿಭಟನೆಗೆ ಕಾರಣವೆಂದರೆ ಪೇಟೆಗೆ ಆಗಮಿಸುವ ಸಾಮಾನ್ಯ ಖಾಸಗಿ ಬಸ್‌ಗಳು(ವಿಶೇಷವಾಗಿ ಬದಿಯಡ್ಕ, ಮುಳ್ಳೇರಿಯ, ಪೇರಾಲ್, ಕಣ್ಣೂರು, ಪೆರ್ಲ ಮತ್ತು ಕಳತ್ತೂರು ಪ್ರದೇಶಗಳಿಗೆ ಹೋಗುವವು) ಹಳೇ ಬಸ್ ನಿಲ್ದಾಣದ ಬಳಿ ನಿಲ್ಲಿಸಲು ಹಿಂಜರಿಯುತ್ತಿವೆ. ನಷ್ಟದಲ್ಲಿ ಓಡುತ್ತಿದ್ದೇವೆ ಎಂದು ನಿರಂತರವಾಗಿ ಹೇಳುವ ಖಾಸಗಿ ಬಸ್‌ಗಳು ಪ್ರಯಾಣ ಸೌಲಭ್ಯ ಒದಗಿಸದೆ ಸಾರ್ವಜನಿಕರಿಗೆ ಏಕೆ ತೊಂದರೆ ನೀಡುತ್ತಿವೆ? ಎಂದು ಪ್ರಯಾಣಿಕರು ಕೇಳುತ್ತಿದ್ದಾರೆ. ಪಂಚಾಯಿತಿ ಆಡಳಿತ ಸಮಿತಿ ತೆಗೆದುಕೊಳ್ಳುವ ನಿರ್ಧಾರ ಅನುಷ್ಠಾನಗೊಳಿಸುವ ಜವಾಬ್ದಾರಿ ಸಂಬಂಧಿತ ಇಲಾಖೆಗಳ ಮೇಲಿದ್ದು, ಅಧಿಕಾರಿಗಳು ಇದಕ್ಕೆ ಸಿದ್ಧರಾಗಿರಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ನಿರ್ಧಾರವಿಲ್ಲದೆ ಮುಗಿವ ಸಭೆಗಳು

ಕುಂಬಳೆ ಬಸ್ ನಿಲ್ದಾಣ ಸಮಸ್ಯೆ ಮತ್ತು ಸಂಚಾರ ಸುಧಾರಣೆಗಳ ಕುರಿತು ಚರ್ಚಿಸಲು ಕುಂಬಳೆ ಠಾಣೆಯಲ್ಲಿ ಈಗಾಗಲೇ ಎರಡು ಬಾರಿ ವಿಶೇಷ ಸಭೆ ಕರೆಯಲಾಗಿತ್ತು. ಆದರೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಕಳೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಎಂವಿಡಿ ಅಧಿಕಾರಿಗಳು, ಕುಂಬಳೆ ಠಾಣಾಧಿಕಾರಿ, ಗ್ರಾಪಂ ಪ್ರತಿನಿಧಿಗಳು ಮತ್ತು ಬಸ್ ನೌಕರರು ಭಾಗವಹಿಸಿದ್ದರು. ಸಭೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದರೂ, ಅಧಿಕಾರಿಗಳು ಅವುಗಳನ್ನು ಪ್ರಾಯೋಗಿಕ ಮಟ್ಟದಲ್ಲಿ ಜಾರಿಗೆ ತರಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಯಾಣಿಕರ ಸಮಸ್ಯೆ ಮನಗಂಡು ಖಾಸಗಿ ಬಸ್‌ಗಳು ಹಳೇ ನಿಲ್ದಾಣವಿರುವಲ್ಲಿ ಪ್ರಯಾಣಿಕರನ್ನು ಇಳಿಸಬೇಕೆಂದು ಪದೇ ಪದೆ ಮನವಿ ಮಾಡುತ್ತಿದ್ದರೂ ಬಸ್ ನಿರ್ವಾಹಕರು ಸಹಕರಿಸುತ್ತಿಲ್ಲ. ಈ ಬಗ್ಗೆ ಎರಡು ಬಾರಿ ನಡೆದ ಚರ್ಚೆ ಯಾವುದೇ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿದೆ. ಮುಖ್ಯವಾಗಿ ಕಾನೂನು ಅನುಷ್ಠಾನಗೊಳಿಸುವಲ್ಲಿ ಪೊಲೀಸರು ಮತ್ತು ಎಂವಿಡಿ ಹಿಂದೇಟು ಹಾಕುತ್ತಿದ್ದಾರೆ. ಸಚಿವರ ಸೂಚನೆಗೂ ಬೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆ ಪ್ರಬಲ ಪ್ರತಿಭಟನೆ ಮಾಡಬೇಕಾಗುತ್ತದೆ.

— ಅಶ್ರಫ್ ಸ್ಕೈಲರ್ ಕಾರ್ಯದರ್ಶಿ, ವ್ಯಾಪಾರಿ ವ್ಯವಸಾಯಿ ಯುವ ಘಟಕ ಕುಂಬಳೆ