ಉಡುಪಿ: ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಊಟೋಪಚಾರ ಹಾಗೂ ಇತರ ವ್ಯವಸ್ಥೆಗಳಿಗಾಗಿ ಗ್ರಾಮ ಪಂಚಾಯಿತಿಗಳ ಸ್ವಂತ ನಿಧಿಯನ್ನು ಬಳಕೆ ಮಾಡುವಂತೆ ಸರ್ಕಾರ ಸೂಚಿಸಿರುವ ಕ್ರಮಕ್ಕೆ ಮಾಜಿ ಸಚಿವ, ಶಾಸಕ ವಿ. ಸುನೀಲ್ ಕುಮಾರ್, ಶಾಸಕ ಯಶ್ಪಾಲ್ ಸುವರ್ಣ ಸಹಿತ ವಿರೋಧ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ
ನ. 24ರಂದು ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನ. 17ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದು, ಸಮಾವೇಶಕ್ಕೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 50 ಮಂದಿ ಫಲಾನುಭವಿಗಳನ್ನು ಕರೆತರುವುದರ ಜೊತೆಗೆ, ಊಟೋಪಚಾರಕ್ಕೆ ತಗಲುವ ವೆಚ್ಚವನ್ನು ಗ್ರಾಮ ಪಂಚಾಯಿತಿಗಳ ಸ್ವಂತ ನಿಧಿಯಿಂದ ಭರಿಸಲು ಮತ್ತು ಇದಕ್ಕೆ ಗರಿಷ್ಠ 25 ಸಾವಿರ ರೂ. ಮಿತಿ ನಿಗದಿಪಡಿಸಿ ಆದೇಶಿಸಲಾಗಿದೆ.
ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾದ ಹಣವನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸುವುದು ಸರಿಯಲ್ಲ ಎಂಬುದು ಬಿಜೆಪಿ ನಾಯಕರ ವಾದ.
ಈ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆದು ಆಗ್ರಹಿಸಿರುವ ಸುನೀಲ್ ಕುಮಾರ್, ಈಗಾಗಲೇ ಅನುದಾನದ ಕೊರತೆಯಿಂದಾಗಿ ಹಲವು ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನವೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಮತ್ತು ಚರಂಡಿಗಳ ನಿರ್ವಹಣೆಯಂತಹ ತುರ್ತು ಕಾಮಗಾರಿಗಳಿಗೆ ಹಣದ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಪಂಚಾಯಿತಿಗಳ ಸೀಮಿತ ಸ್ವಂತ ನಿಧಿಯನ್ನು ಸಮಾವೇಶದ ಊಟೋಪಚಾರಕ್ಕೆ ಬಳಸಲು ಸೂಚಿಸಿರುವುದು ಸರಿಯಲ್ಲ. ಗ್ರಾಪಂ ಅನುದಾನ ಸ್ಥಳಿಯ ಅಭಿವೃದ್ಧಿ ಮತ್ತು ಜನರ ಅಗತ್ಯಗಳಿಗೆ ಮಾತ್ರ ಬಳಸಬೇಕೇ ಹೊರತು ಸಮಾವೇಶಗಳ ಖರ್ಚಿಗೆ ಬಳಸಬಾರದು ಎಂದು ವಿ. ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ
ಗ್ಯಾರಂಟಿ ಯೋಜನೆಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನ ಮಾಡಿ ರಾಜ್ಯದ ಆರ್ಥಿಕ ಬೊಕ್ಕಸವನ್ನು ದಿವಾಳಿ ಮಾಡಿ ಇದೀಗ ಗ್ರಾಮ ಪಂಚಾಯತ್ ನಲ್ಲಿ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಬೇಕಾದ ಮೊತ್ತವನ್ನು ರಾಜಕೀಯ ಪ್ರೇರಿತ ಕಾರ್ಯಕ್ರಮಕ್ಕೆ ಖರ್ಚು ಮಾಡಲು ಮುಂದಾಗುವ ಮೂಲಕ ಗ್ರಾಮ ಪಂಚಾಯತ್ ಗಳನ್ನೂ ದಿವಾಳಿಯಾಗಿಸಲು ಮುಂದಾಗಿದ್ದಾರೆ ಎಂದು ಯಶ್ ಪಾಲ್ ಸುವರ್ಣ ಆಕ್ಷೇಪಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಗ್ರಾಮ ಪಂಚಾಯಿತಿ ತೆರಿಗೆ ಹಣವನ್ನು ಗ್ಯಾರಂಟಿ ಸಮಾವೇಶದ ಊಟೋಪಚಾರಕ್ಕೆ ನೀಡುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.