ಉಡುಪಿಯ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಸ್​.ಜಿ. ಕುರ್ಯ ಅವರಿಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಂಘದ ಧ್ವಜ ಹಸ್ತಾಂತರಿಸಿದರು. ರಾಜೇಶ್​ ಶೆಟ್ಟಿ, ನಝೀರ್​ ಪೊಲ್ಯ, ರಮೇಶ್​ ಕುಟ್ಟಪ್ಪ, ಆಸ್ಟ್ರೊ ಮೋಹನ್​, ಅರುಣಕುಮಾರ್​ ಶಿರೂರು, ಹರೀಶ್​ ಸುವರ್ಣ, ಉಮೇಶ್​ ಮಾರ್ಪಳ್ಳಿ ಇದ್ದರು. 
ಉಡುಪಿ

ಪತ್ರಕರ್ತ ವೃತ್ತಿಯ ಗೌರವ ಎತ್ತಿ ಹಿಡಿಯೋಣ

* ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಿವಿಮಾತು

* ಉಡುಪಿ ಜಿಲ್ಲಾ, ತಾಲೂಕು ಸಂಘಗಳ ಪದಗ್ರಹಣ 

ಉಡುಪಿ: ಗೆದ್ದಾಗ ಬೀಗದೆ, ಸೋತಾಗ ಸಂಘ ತ್ಯಜಿಸುವ ಕಾರ್ಯ ಮಾಡದೆ ಎಲ್ಲವನೂ ಸಹಸಿಕೊಂಡು ಹೋಗುವ ಗುಣ ನಮ್ಮಲ್ಲಿರಬೇಕು. ಸೋಲು-ಗೆಲುವು ಶಾಶ್ವತವಲ್ಲ. ನಾವೆಲ್ಲರೂ 'ಪತ್ರಕರ್ತ' ಎಂಬ ಒಂದೇ ಸಮುದಾಯದವರು. ಈ ವೃತ್ತಿಯನ್ನು ಅಪ್ಪಿ, ಒಪ್ಪಿ ಬಂದ ಮೇಲೆ ನಮ್ಮ ಹಾಗೂ ಕೆಲಸ ಮಾಡುವ ಪತ್ರಿಕೆಯ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಿವಿಮಾತು ಹೇಳಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಡಾ. ಎ.ವಿ. ಬಾಳಿಗಾ ಮೆಮೋರಿಯಲ್​ ಐಎಂಎ ಹಾಲ್​ನಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪತ್ರಿಕಾ ಭವನ ಸಮಿತಿ ವತಿಯಿಂದ ಹಾಗೂ ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ತಾಲೂಕು ಸಂಘಗಳ ಸಹಕಾರದಲ್ಲಿ ಶನಿವಾರ (ಮಾ.7) ಆಯೋಜಿಸಿದ್ದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಂಘದ ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಅಜ್ಜಮಾಡ ರಮೇಶ್​ ಕುಟ್ಟಪ್ಪ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಸಂಘಟನೆಗಳ ಕಾರ್ಯನಿರ್ವಹಣೆ ಕುರಿತು ವಿವರಿಸಿದರು. 
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘದ ನೂತನ ಅಧ್ಯಕ್ಷ ಎಸ್​.ಜಿ. ಕುರ್ಯ ಮಾತನಾಡಿ, ಸಂಘದ ವಿವಿಧ ಕಾರ್ಯಯೋಜನೆಗಳ ಕುರಿತು ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು, ರಾಜ್ಯ ಸಂಘದ ಸದಸ್ಯ ಆಸ್ಟ್ರೊ ಮೋಹನ್​, ರಾಷ್ಟ್ರೀಯ ಸಮಿತಿ ಸದಸ್ಯ ಅರುಣಕುಮಾರ್​ ಶಿರೂರು, ಸಂಘದ ಕೋಶಾಧಿಕಾರಿ ಹರೀಶ್​ ಸುವರ್ಣ ಉಪಸ್ಥಿತರಿದ್ದರು.

'ಸನ್ಮತಿ' ಪತ್ರಿಕೆ ಬಿಡುಗಡೆ

ಇತ್ತೀಚೆಗೆ ನಿಧನರಾದ ಪತ್ರಕರ್ತ ಬ್ರಹ್ಮಾವರದ ಶೇಷಗಿರಿ ಭಟ್​ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಸಾಧಕ ಸದಸ್ಯರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಮಾಸಿಕ ಪತ್ರಿಕೆ 'ಸನ್ಮತಿ'ಯನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಜಿತ್​ ಆರಾಡಿ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಚೇತನ್​ ಮಟಪಾಡಿ ವಂದಿಸಿದರು.

ಮಂದಿರಕ್ಕೆ ಸಮಾನ ಪತ್ರಿಕಾ ಭವನ

ಮನೆಯಲ್ಲಿನ ಸದಸ್ಯರ ನಡುವೆಯೇ ಸಣ್ಣಪುಟ್ಟ ವ್ಯತ್ಯಾಸವಾಗುತ್ತದೆ. ಅದಕ್ಕೆ ನಮ್ಮ ಸಂಘವೂ ಹೊರತಾಗಿಲ್ಲ. ಬೇಸರ, ಆಕ್ರೋಶ, ಅಸಮಾಧಾನ ಕಾರಣದಿಂದ ಸಂಘದ ರಥ ಹಿಂದಕ್ಕೆ ಎಳೆಯಬೇಡಿ. ಇದು ನಿನ್ನೆ ಮೊನ್ನೆ ಹುಟ್ಟಿದ ಸಂಘವಲ್ಲ. 94 ವರ್ಷದ ಹಿಂದೆ ಡಿ.ವಿ. ಗುಂಡಪ್ಪ ಹುಟ್ಟಿಹಾಕಿದ ಬೃಹತ್​ ಸಂಘಟನೆಯಾಗಿದ್ದು, ದೇಶದಲ್ಲಿಯೇ ಮಾದರಿಯಾಗಿದೆ. ಪತ್ರಿಕಾ ಭವನವು ಮಂದಿರಕ್ಕೆ ಸಮಾನವಾಗಿದೆ. ಇಲ್ಲಿ ಎಲ್ಲ ಧರ್ಮದ ಜನರೂ ಬರುತ್ತಾರೆ. ಸುಖ-ದು:ಖ, ತೊಡಕು, ಸಮಸ್ಯೆಗಳನ್ನು ಇಲ್ಲಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಹೀಗಾಗಿ ಬರವಣಿಗೆಯಷ್ಟೇ ನಮ್ಮ ನಡೆ-ನುಡಿಯೂ ಮುಖ್ಯ. ವೃತ್ತಿ ಮನೋಧರ್ಮ, ಬದ್ಧತೆ ನಮ್ಮ ಗುರಿಯಾಗಿರಬೇಕು. ಇತ್ತೀಚೆಗೆ ಪತ್ರಕರ್ತ 'ಲೇಬಲ್​'ನೊಂದಿಗೆ ಈ ವೃತ್ತಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು ಬ್ಲ್ಯಾಕ್​ಮೇಲ್​ ಮಾಡತೊಡಗಿದ್ದಾರೆ. ಕೆಲವರು ಯು-ಟ್ಯೂಬ್​ ಚಾನಲ್​ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದು, ಇಂತಹವರ ಬಗ್ಗೆ ಸಂಘ ಎಚ್ಚರಿಕೆ ವಹಿಸಬೇಕು. ಸದಸ್ಯತ್ಯ ನೀಡುವಾಗ ನೈಜತೆ ಪರಿಶೀಲಿಸಿ ನೀಡಬೇಕು. ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕದಿದ್ದಲ್ಲಿ ಈ ವೃತ್ತಿಗೂ ಅಪಖ್ಯಾತಿ ಬರುತ್ತದೆ ಎಂದು ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.