ಎನ್ಎಸ್ಯುಐ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್ ಬಲ್ಲಾಳ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮಗಳಿಂದಾಗಿ ನೀಟ್-ಯುಜಿ ಪರೀಕ್ಷೆ ರದ್ದಾಗಲು ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ. ಎನ್ ಟಿ ಎ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಪದೇ ಪದೇ ವಿಫಲವಾಗಿದ್ದು, ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿರುವ ಎನ್ ಟಿ ಎ ತಕ್ಷಣ ವಿಸರ್ಜಿಸಬೇಕು ಎಂದು ಎನ್ಎಸ್ಯುಐ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್ ಬಲ್ಲಾಳ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 3 ವರ್ಷದಲ್ಲಿ 2ನೇ ಬಾರಿ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಕೋಚಿಂಗ್ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಹರಾಜು ಹಾಕಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು 2 ವರ್ಷ ತಯಾರಿ ನಡೆಸಿ, ಕೋಚಿಂಗ್ಗೆ ಲಕ್ಷಾಂತರ ರೂ. ಖರ್ಚು ಮಾಡಿ ಈಗ ತೀವ್ರ ಮಾನಸಿಕ ಆಘಾತ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ತಪ್ಪಿಲ್ಲದೆ ಮರು- ಪರೀಕ್ಷೆ ಅನ್ಯಾಯದ ಶಿಕ್ಷೆಯಾಗಿದೆ. ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ರಕ್ಷಣೆಗೆ ವೈದ್ಯಕಿಯ ಪ್ರವೇಶ ಕರ್ನಾಟಕ ಸಿಇಟಿ ಮೂಲಕವೇ ನಡೆಯಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ನ್ಯಾಯಾಂಗ ಆಯೋಗ ರಚಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕರ್ನಾಟಕಕ್ಕೆ ಪ್ರತ್ಯೇಕ ವೈದ್ಯಕಿಯ ಪ್ರವೇಶ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾಯ ವಿಳಂಬವಾದರೆ ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಬ್ರಹ್ಮಾವರದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್ಎಸ್ಯುಐ ಪ್ರಮುಖರಾದ ಶರತ್ ಕುಂದರ್, ಅನೀಶ್ ಕುಮಾರ್, ಅಧ್ಯಾನ್ ಮೊದಲಾದವರು ಉಪಸ್ಥಿತರಿದ್ದರು.