ಇಸಿಆರ್​ ಕಾಲೇಜಿಗೆ ಎನ್​ಎಸ್​ಯುಐ ಜಿಲ್ಲಾ ಸಮಿತಿಯ ಅಧ್ಯಕ್ಷ ಸೌರಭ್​ ಬಲ್ಲಾಳ, ಉಪಾಧ್ಯಕ್ಷ ಶರತ್​ ಕುಂದರ್​ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದರು. ಸಮಿತಿಯ ಹಾಗೂ ಬ್ಲಾಕ್​ ಸದಸ್ಯರು ಇದ್ದರು. 
ಉಡುಪಿ

ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಸಹಿಸೆವು

* ಎನ್​ಎಸ್​ಯುಐ ಅಧ್ಯಕ್ಷ ಸೌರಭ್​ ಬಲ್ಲಾಳ ಎಚ್ಚರಿಕೆ

* ಇಸಿಆರ್​ ಕಾಲೇಜಿಗೆ ಭೇಟಿ, ವಿದ್ಯಾರ್ಥಿಗಳಿಗೆ ಸಾಂತ್ವನ

ಉಡುಪಿ: ಇಸಿಆರ್​ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಹಲ್ಲೆ ಮತ್ತು ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್​ಎಸ್​ಯುಐ ಉಡುಪಿ ಘಟಕದ ಪದಾಧಿಕಾರಿಗಳು, ಪ್ರಕರಣ ನಡೆದ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. 
ಎನ್​ಎಸ್​ಯುಐ ಅಧ್ಯಕ್ಷ ಸೌರಭ್​ ಬಲ್ಲಾಳ, ಉಪಾಧ್ಯಕ್ಷ ಶರತ್​ ಕುಂದರ್​ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾದಲ್ಲಿ ನಾವು  ಸಹಿಸಿಕೊಳ್ಳುವುದಿಲ್ಲ. ನಮ್ಮ ಸಂಘಟನೆ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ಇಲಾಖೆಯಿಂದ, ಕಾಲೇಜಿನ ಆಡಳಿತ ಮಂಡಳಿ ಅಥವಾ ಬೋಧಕ ವರ್ಗದಿಂದ ತೊಂದರೆಯಾದರೆ ನಿಮ್ಮೊಂದಿಗೆ ನಾವು ಕೈಜೋಡಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರು ಮಾತನಾಡಿ, ಇನ್ಮುಂದೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಕೆಲವು ಚಟುವಟಿಕೆಗಳ ಕುರಿತಾಗಿ ನಿಮ್ಮ ಸಂಘಟನೆ ಮುಖಾಂತರ ನಮ್ಮ ಗಮನಕ್ಕೆ ಬಂದಿದೆ. ಆ ವಿಚಾರಗಳನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಎನ್​ಎಸ್​ಯುಐ ಜಿಲ್ಲಾ ಸಮಿತಿಯ ಹಾಗೂ ಬ್ಲಾಕ್​ ಸಮಿತಿಯ ಸದಸ್ಯರು ಇದ್ದರು.