ಉಡುಪಿ: ಇಂದಿನ ಯುವಸಮುದಾಯ ಮೊಬೈಲ್ ಗೀಳಿನಿಂದ ಹೊರಬಂದು ತಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಸಮಯಪಾಲನೆ, ಶಿಸ್ತು, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ಮೌಲ್ಯ ಗಟ್ಟಿಗೊಳಿಸುವಲ್ಲಿ ಎನ್ಎಸ್ಎಸ್ನ ಪಾತ್ರ ಪ್ರೇರಕವಾಗಿದೆ ಎಂದು ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಉಡುಪಿ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಸಂಸ್ಥೆ (ಡಯಟ್)ಯಲ್ಲಿ ಹಮ್ಮಿಕೊಂಡಿದ್ದ ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಫಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ನಿರಂತರವಾಗಿರಬೇಕು, ಸ್ವಚ್ಛತೆ ಹೊರಗಫಿ್ಟೇ ಅಲ್ಲ, ನಮ್ಮ ಮನಸ್ಸಿನೊಳಗೂ ಇರಬೇಕು. ಅದಕ್ಕಾಗಿ ಯುವಜನತೆ ಜಾತಿ, ಮತ, ಭೇದ-ಭಾವ ಮರೆತು ಒಟ್ಟಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜ್ನ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪರಿಣಾಮಕಾರಿ ವೇದಿಕೆಯಾಗಿದೆ ಇಂತಹ ಚಟುವಟಿಕೆಗಳಿಂದ ಯುವಶಕ್ತಿ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಕಾಲೇಜ್ ಅಭಿವೃದ್ಧಿ ಸಮಿತಿಯ ಸದಸ್ಯ ದಿನೇಶ್ ಹಿಂಬಾಳೆ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಇಂದಿರಾ ಮಾತನಾಡಿದರು.
ಕಾಲೇಜ್ನ ಹಿರಿಯ ಉಪನ್ಯಾಸಕಿ ಡಾ. ಉಷಾ , ಡಯಟ್ನ ಹಿರಿಯ ಉಪನ್ಯಾಸಕ ಸುರೇಂದ್ರ, ಕಾಲೇಜ್ ಅಭಿವೃದ್ಧಿ ಸಮಿತಿಯ ಸದಸ್ಯೆ ಶ್ರೀಲತಾ, ಎನ್ಎಸ್ಎಸ್ ಸಹಶಿಬಿರಾಧಿಕಾರಿ ಛಾಯಾ ಶೆಟ್ಟಿ, ಎನ್ಎಸ್ಎಸ್ನ ನಾಯಕಿ ವಿಜೇತಾ, ಉಪನಾಯಕಿ ಪ್ರತಿಭಾ, ಕಾಲೇಜ್ನ ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಎನ್ಎಸ್ಎಸ್ ಗೀತೆ ಹಾಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶುಭಗೀತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ಗಂಗಾಧರ್ ವಿ.ಎ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರೇಮಾ ಬಿ. ವಂದಿಸಿದರು.