ಉಡುಪಿ ಮಲ್ಪೆಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ವೆಲಂಕಣಿ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವದ ನೊವೇನಾ ಪ್ರಾರ್ಥನೆಗೆ ಡಾ. ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಡಾ.ಬ್ಯಾಪ್ಟಿಸ್ಟ್ ಮಿನೇಜಸ್, ಜೋನ್ ಫೆರ್ನಾಂಡಿಸ್, ನವೀನ್ ಫೆರ್ನಾಂಡಿಸ್, ಪ್ರೆಸಿಲ್ಲಾ ಆಳ್ವಾ, ಡೆನಿಸ್ ಲಸ್ರಾದೊ ಇದ್ದರು.
* ಡಾ. ಜೆರಾಲ್ಡ್ ಐಸಾಕ್ ಲೋಬೊ ಆಶಯ
* 9 ದಿನಗಳ ನೊವೇನಾ ಪ್ರಾರ್ಥನೆಗೆ ಚಾಲನೆ
ಉಡುಪಿ: ಕ್ರೈಸ್ತ ನಂಬಿಕೆಯಲ್ಲಿ ಶಿಲುಬೆಯು ಮಾನವ ಜೀವನದ ಕೊನೆಯಲ್ಲ. ಅದು ಹೊಸ ಜೀವನದ ಮತ್ತು ಪುನರುತ್ಥಾನದ ಆರಂಭ. ಶಿಲುಬೆಯು ಯೇಸು ಕ್ರಿಸ್ತನ ತ್ಯಾಗ, ಕ್ಷಮೆ ಮತ್ತು ಅನಾದಿ ಪ್ರೀತಿಯ ಸಂಕೇತ. ಅದು ಕಷ್ಟಗಳ ಅಂತ್ಯವಲ್ಲ, ನಂಬಿಕೆಯ ಹೊಸ ದಾರಿ. ಕ್ರೈಸ್ತರೆಲ್ಲರೂ ಉತ್ತಮ ನಡೆ, ಪ್ರೀತಿ ಮತ್ತು ಸಹಾಯಹಸ್ತದ ಮೂಲಕ ಜಗತ್ತಿಗೆ ಕ್ರಿಸ್ತನ ಬೆಳಕು ತೋರಿಸಬೇಕಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಅಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.
ಮಲ್ಪೆ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆ ವಾರ್ಷಿಕ ಮಹೋತ್ಸವದ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆಗೆ ಗುರುವಾರ (ಆ.6) ಸಂಜೆ ಚಾಲನೆ ನೀಡಿ ಮಾತನಾಡಿದರು.
ಪವಿತ್ರ ಬಲಿಪೂಜೆಯಲ್ಲಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ. ಡಾ.ಬ್ಯಾಪ್ಟಿಸ್ಟ್ ಮಿನೇಜಸ್, ಬ್ರಹ್ಮಾವರ ಚರ್ಚ್ನ ಜೋನ್ ಫೆರ್ನಾಂಡಿಸ್, ಚರ್ಚ್ನ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕ ಡೆನಿಸ್ ಲಸ್ರಾದೊ ಹಾಗೂ ಚರ್ಚ್ನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಒಂಬತ್ತು ದಿನಗಳ ವೊವೇನಾ ಪ್ರಾರ್ಥನೆಯಲ್ಲಿ ನೂತನ ದಂಪತಿ, ದಾನಿಗಳು, ಯುವಜನರು, ಯಾಜಕರು ಮತ್ತು ಧಾರ್ಮಿಕರು, ವೃದ್ಧರು, ರೋಗಿಗಳು ಹಾಗೂ ಕುಟುಂಬಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಕೆಯಾಗಲಿದೆ. ಆ.13ರಂದು ಮಧ್ಯಾಹ್ನ ಆದಿಉಡುಪಿ ಜಂಕ್ಷನ್ನಿಂದ ಚರ್ಚ್ನವರೆಗೆ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆ ನಡೆಯಲಿದೆ. ಶಿವಮೊಗ್ಗ ಧರ್ಮಪ್ರಾಂತ್ಯದ ಫ್ರಾಂಕ್ಲಿನ್ ಡಿಸೋಜಾ ಚಾಲನೆ ನೀಡಲಿದ್ದಾರೆ. ಆ.15ರ ಬೆಳಗ್ಗೆ 10:30ಕ್ಕೆ ಉಡುಪಿ ಧರ್ಮಪ್ರಾಂತದ ಅಧ್ಯಕ್ಷ ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಬಲಿಪೂಜೆ ನೆರೆವೇರಿಸಲಿದ್ದಾರೆ.
ಈ ಹಬ್ಬದಲ್ಲಿ 'ಆತ ಹೇಳಿದಂತೆ ಮಾಡಿ' ಎನ್ನುವುದು ಸಂದೇಶವಾಗಿದೆ. ಪ್ರತಿನಿತ್ಯ ದೇವರ ವಾಕ್ಯ ಓದಬೇಕು. ಬೈಬಲ್ ಓದುವಾಗ ದೇವರು ನಮ್ಮೊಂದಿಗೆ ಹಾಗೂ ನಾವು ಪ್ರಾರ್ಥನೆ ಮೂಲಕ ದೇವರೊಂದಿಗೆ ಮಾತನಾಡುತ್ತೇವೆ. ಮೇರಿ ಮಾತೆಯು ಯೇಸು ಸ್ವಾಮಿಯ ಮೂಲಕ ದೇವರ ಕೆಲಸಗಳನ್ನು ಕಾರ್ಯರೂಪಗೊಳಿಸಿದ್ದಾರೆ. ಅವರ ಜೀವನಾದರ್ಶ ಅಳವಡಿಸಿಕೊಳ್ಳೋಣ.
— ಡಾ. ಜೆರಾಲ್ಡ್ ಐಸಾಕ್ ಲೋಬೊ. ನಿವೃತ್ತ ಅಧ್ಯಕ್ಷ.