ಬ್ಯಾನರ್‌ನಲ್ಲಿ ಸಿಎಂ ಹಾಗೂ ಡಿಸಿಎಂ ಭಾವಚಿತ್ರ ಪ್ರಕಟಿಸದೆ, ಕೇವಲ ಸ್ಥಳೀಯ ಶಾಸಕರ ಭಾವಚಿತ್ರ ಅಳವಡಿಸಿರುವುದು. 
ಉಡುಪಿ

ದೇವರಾಜ ಅರಸು ಅಭಿವೃದ್ಧಿ ನಿಗಮ ವ್ಯವಸ್ಥಾಪಕರಿಗೆ ನೋಟಿಸ್

ಬೆಳ್ತಂಗಡಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ದ.ಕ. ಜಿಲ್ಲಾ ಘಟಕದಿಂದ 2025-26ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಉಚಿತ ಸುಧಾರಿತ ಉಪಕರಣ ವಿತರಣಾ ಕಾರ್ಯಕ್ರಮದ ವೇದಿಕೆ ಬ್ಯಾನರ್‌ನಲ್ಲಿ ಸಿಎಂ ಹಾಗೂ ಉಪಮುಖ್ಯಮಂತ್ರಿಗಳ ಭಾವಚಿತ್ರ ಪ್ರಕಟಿಸದೆ, ಕೇವಲ ಸ್ಥಳೀಯ ಶಾಸಕರ ಭಾವಚಿತ್ರ ಅಳವಡಿಸಿರುವ ಕುರಿತು ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ನವೀನ್ ಗೌಡ ದೂರು ಸಲ್ಲಿಸಿದ್ದಾರೆ.

ದೂರಿನ ಹಿನ್ನೆಲೆ ದಕ್ಷಿಣ ಕನ್ನಡ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ಸರ್ಕಾರ ಅನೇಕ ಬಾರಿ ಸುತ್ತೋಲೆ ಹಾಗೂ ಮಾರ್ಗಸೂಚಿ ಹೊರಡಿಸಿದ್ದರೂ, ಸಂಬಂಧಿತ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಏಕೆ ಶಿಸ್ತಿನ ಕ್ರಮ ಜರುಗಿಸಬಾರದು ಎಂಬ ಕುರಿತು ನೋಟಿಸ್ ಸ್ವೀಕರಿಸಿದ ದಿನದಿಂದ ಮೂರು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ.