ನಡಕ್ಕಾವು ಒಳಾಂಗಣ ಕ್ರೀಡಾಂಗಣ ಮತ್ತು ಫುಟ್ಬಾಲ್ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ ನೀಡಿ ಪರಿಶೀಲಿಸಿದರು. ಸಾಜಿದಾ ಸಫರುಲ್ಲಾ, ಎಂ.ರಾಜೀಶ್ ಬಾಬು ಇತರರಿದ್ದರು.
ಕಾಸರಗೋಡು: ನಡಕ್ಕಾವು ಒಳಾಂಗಣ ಕ್ರೀಡಾಂಗಣ ಮತ್ತು ಫುಟ್ಬಾಲ್ ಕ್ರೀಡಾಂಗಣಗಳ ಗರಿಷ್ಠ ಪ್ರಯೋಜನವನ್ನು ಕ್ರೀಡಾ ಪ್ರೇಮಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಲಭ್ಯವಾಗುವಂತೆ ಮಾಡಲು, ಈ ಕ್ರೀಡಾಂಗಣಗಳನ್ನು ತಕ್ಷಣವೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಸೂಚಿಸಿದರು.
ತ್ರಿಕರಿಪುರದ ನಡಕ್ಕಾವು ಒಳಾಂಗಣ ಕ್ರೀಡಾಂಗಣ ಮತ್ತು ಫುಟ್ಬಾಲ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ವಾತನಾಡಿ, ಕ್ರೀಡಾ ಇಲಾಖೆ, ಗ್ರಾಮ ಪಂಚಾಯಿತಿ ಸಹಿತ ಇತರ ಇಲಾಖೆಗಳ ಸಮನ್ವಯದೊಂದಿಗೆ ಕ್ರೀಡಾಂಗಣ ಕ್ರೀಡಾಪಟುಗಳ ಬಳಗೆ ಸಿಗುವಂತೆ ಮಾಡಲು ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ (ಡಿಡಿಸಿ) ಸಭೆಯಲ್ಲಿ ತ್ರಿಕರಿಪುರ ಶಾಸಕ ಸಂದೀಪ್ ವಾರಿಯರ್ ಅವರು ತ್ರಿಕರಿಪುರದಲ್ಲಿ ಕ್ರೀಡಾಂಗಣಗಳನ್ನು ಶ್ರೀ ತೆರೆಯಬೇಕು ಎಂದು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತ್ರಿಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಜಿದಾ ಸಫರುಲ್ಲಾ, ಉಪಾಧ್ಯಕ್ಷ ಎಂ.ರಾಜೀಶ್ ಬಾಬು, ಸದಸ್ಯ ಫಾಯಿಸ್ ಯು.ಪಿ. ಉಪಸ್ಥಿತರಿದ್ದರು.