ಆದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಿಳಾ ಧಾರ್ಮಿಕ ಸಭೆಯಲ್ಲಿ ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ, ಪ್ರಮೀಳಾ ಎಸ್.ರಾವ್, ಶಕುಂತಳಾ ಶೆಟ್ಟಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಗುರುಪುರ
ಭಗವಂತನ ಇಚ್ಛೆ ಇಲ್ಲದೆ ಇಲ್ಲಿ ಯಾವುದೇ ಕೆಲಸ ನಡೆಯದು. ಭಕ್ತಿ, ಶ್ರದ್ಧೆ ಇದ್ದಲ್ಲಿ ಒಳ್ಳೆಯ ವ್ಯಕ್ತಿತ್ವ ಕಾಣಲು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು.
ಆದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ರುದ್ರಯಾಗ ಮತ್ತು ಸಹಸ್ರ ನಾರಿಕೇಳ ಮಹಾಗಣಪತಿ ಹೋಮದ ಪ್ರಯುಕ್ತ ಗುರುವಾರ ಮಹಿಳಾ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಂಗಳೂರು ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಮಾಲಾಡಿ ಅಧ್ಯಕ್ಷತೆ ವಹಿಸಿ, ಸಮಾಜ ಸದೃಢವಾಗಬೇಕಿದ್ದರೆ ನಾವೆಲ್ಲರೂ ಒಗ್ಗೂಡಿ ಚಿಂತಿಸಬೇಕು. ಹಿಂದು ಸಮಾಜದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನಮಾನ ನೀಡಲಾಗಿದ್ದರೂ ಭೂಮಿ, ಪ್ರಕೃತಿ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಾವೆಲ್ಲರೂ ಒಂದಾಗಿ ನೈಜ ಮಾನವೀಯತೆ ಬಗ್ಗೆ ಚಿಂತಿಸಬೇಕು ಎಂದರು.
ಕೆನರಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರಮೀಳಾ ಎಸ್.ರಾವ್ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂಆರ್‌ಪಿಎಲ್ ನಿವೃತ್ತ ಅಧಿಕಾರಿ ವೀಣಾ ಟಿ.ಶೆಟ್ಟಿ ಮಾತನಾಡಿದರು. ಸುನೀಲಾ ಪಿ.ಶೆಟ್ಟಿ ಸ್ವಾಗತಿಸಿದರು. ಶಶಿಕಲಾ ಎಸ್.ಶೆಟ್ಟಿ ಕಾಂಬೋಡಿಗುತ್ತು ಅವರನ್ನು ಗೌರವಿಸಲಾಯಿತು. ಪ್ರಫುಲ್ಲಾ ಆರ್.ರೈ ಕಲ್ಲಾಜೆಗುತ್ತು, ನಿವೃತ್ತ ಬ್ಯಾಂಕ್ ಅಧಿಕಾರಿ ಶಾಲಿನಿ ಶೆಟ್ಟಿ, ಸಬಿತಾ ಆರ್.ಶೆಟ್ಟಿ, ರೂಪಾ ವಿ.ಶೆಟ್ಟಿ, ರೇಖಾಲಕ್ಷ್ಮೀ ಎಸ್.ಹೆಗ್ಡೆ, ಮೈನಾ ಶೆಟ್ಟಿ, ಕಾಮಿನಿ ಜೆ.ಶೆಟ್ಟಿ. ಅನಸೂಯ ಎಂ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಡಾ.ಪ್ರಿಯಾ ಎಚ್.ನಿರೂಪಿಸಿ, ಶಾರಿಕಾ ಟಿ.ರೈ ವಂದಿಸಿದರು. ಬಳಿಕ ಜಗದೀಶ ಆಚಾರ್ಯ ಪುತ್ತೂರು ಬಳಗವರಿಂದ ಭಕ್ತಿ ಗಾನಸುಧೆ ಜರುಗಿತು.
ಸಮುದ್ರದಲ್ಲಿ ಸಾಗುವ ಹಡಗುಗಳ ದಾರಿ ತಪ್ಪದಂತೆ ಕಾರ್ಯನಿರ್ವಹಿಸುವ ಲೈಟ್‌ಹೌಸ್‌ಗಳಂತೆ ಸಮಾಜದ ದಾರಿ ತಪ್ಪದಂತೆ ದೇವಸ್ಥಾನಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಧಾರ್ಮಿಕ ಚಿಂತನೆ, ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿಕೊಡಬೇಕು.