ಉಡುಪಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಡಾ. ಅಶೋಕ್ ಕಾಮತ್, ನಿರಾಲಿ ವೋರಾ, ಅಲ್ಕಾ ಪೈ, ಇಂದಿರಾ ಬಿ., ಕಾವ್ಯಾ ನಾಯಕ್, ಲತಾ, ತಾರಾದೇವಿ, ವಿಮಲಾ ಶೇಟ್, ನವೀನ್ ಉಪಸ್ಥಿತರಿದ್ದರು.
* ವಿದ್ಯಾರ್ಥಿಗಳಿಗೆ ಡಾ. ಅಶೋಕ್ ಕಾಮತ್ ಕಿವಿಮಾತು
* ಸರ್ಕಾರಿ ಬಾಲಕಿಯರ ಹೈಸ್ಕೂಲ್ನಲ್ಲಿ ನೋಟ್ಬುಕ್ ವಿತರಣೆ
ಉಡುಪಿ: ಇಂದಿನ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿರುವುದು ಆತಂಕದ ವಿಚಾರ. ಮೊಬೈಲ್ನ ಅಗತ್ಯೆತೆ ಖಂಡಿತ ಇದೆ. ಆದರೆ, ದಿನದಲ್ಲಿ ಎಷ್ಟು ಸಮಯ ಮೊಬೈಲ್ ನೋಡಬೇಕು ಎಂಬ ಕುರಿತು ವಿದ್ಯಾರ್ಥಿಗಳು ಅಭ್ಯಾಸದ ಟೈಮ್ ಟೇಬಲ್ನಲ್ಲಿ 'ಸ್ಕ್ರೀನ್ ಟೈಮ್' ಕೂಡ ಅಳವಡಿಸಿಕೊಳ್ಳಬೇಕು. ಮಾಡುವ ಯಾವುದೇ ಕೆಲಸವನ್ನು ಅತ್ಯಂತ ಖುಷಿಯಿಂದ ಮಾಡಬೇಕು. ದಾನಿಗಳು ನೀಡಿದ ನೋಟ್ ಬುಕ್ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉಡುಪಿಯ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಕಿವಿಮಾತು ಹೇಳಿದರು.
ಉಡುಪಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೌಢಶಾಲೆಯ 343 ವಿದ್ಯಾರ್ಥಿನಿಯರಿಗೆ ಹಿರಿಯಡ್ಕದ ಜನೆಸಿಸ್ ಪ್ಯಾಕೆಜಿಂಗ್ ಪ್ರೈ.ಲಿ.ನ ಮುಖ್ಯಸ್ಥೆ ನಿರಾಲಿ ವೋರಾ ಅವರು ಕೊಡುಗೆಯಾಗಿ ನೀಡಿದ 2.5 ಲಕ್ಷ ರೂ. ಮೌಲ್ಯದ ನೋಟ್ ಬುಕ್ ವಿತರಿಸಿದರು. ನವನೀತ್ ಪಬ್ಲಿಕೇಶನ್ನ ಗುಣಮಟ್ಟದ ಪುಸ್ತಕಗಳ ವಿತರಣೆಯ ಜವಾಬ್ದಾರಿಯನ್ನು ಒನ್ ಗುಡ್ ಸ್ಟೆಪ್ ಬೆಂಗಳೂರು ಸಂಸ್ಥೆಯ ಅಲ್ಕಾ ಪೈ ವಹಿಸಿಕೊಂಡಿದ್ದರು.
ಎಸ್ಡಿಎಂಸಿ ಅಧ್ಯಕ್ಷೆ ಕಾವ್ಯಾ ನಾಯಕ್, ಗೌರವಾಧ್ಯಕ್ಷೆ ತಾರಾದೇವಿ, ಸದಸ್ಯರಾದ ಲತಾ, ವಿಮಲಾ ಶೇಟ್ ಮತ್ತು ನವೀನ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಇಂದಿರಾ ಬಿ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಅವನಿ ಎಂ. ಮೇಸ್ತ ವಂದಿಸಿದರು.