ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ಸಚಿಕವ ಖಾದರ್ ಭೇಟಿ ನೀಡಿದರು.
ಉಡುಪಿ: ದೇಶದಲ್ಲಿ ಮತ್ತೆ ಕರೋನಾ ಸೋಂಕು ಕಂಡುವರುತ್ತಿದೆ. ಪರೀಕ್ಷೆ ನಡೆಸಿದಾಗ ಕೆಲವರಲ್ಲಿ ಸೋಂಕು ದೃಢಪಟ್ಟರೂ ರಾಜ್ಯದಲ್ಲಿ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವಾಲಯ, ಸೇಂಟ್ ಪೀರ್ಟಸ್ ಚರ್ಚ್, ಮಲಿಕ್ ದಿನಾರ್ ಮಸೀದಿ ಹಾಗೂ ಕತ್ತಲೆ ಬಸದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಡೆಂಗ್ಯೂ, ಎಚ್1ಎನ್1 ಹಾಗೂ ಕೋವಿಡ್ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮತ್ತು ಸ್ಕ್ರೀನಿಂಗ್ ವ್ಯವಸ್ಥೆ ಮುಂದುವರಿದಿದೆ. ವೈರಸ್ಗಳು ಪರಿಸರದಲ್ಲಿ ಯಾವಾಗಲೂ ಇರುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವೈರಸ್ಗಿಂತ ನಾವು ಗಟ್ಟಿಯಾಗಬೇಕು. ಉತ್ತಮ ಆಹಾರ ಪದ್ಧತಿ, ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ವೈರಲ್ ಜ್ವರಗಳ ಕಾಲವಾಗಿದ್ದು, ಜ್ವರ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಬಿಸಿ ನೀರು ಕುಡಿಯುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಸೊಳ್ಳೆಗಳ ಉತ್ಪತ್ತಿ ತಡೆಯುವಲ್ಲಿ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಸಹಕರಿಸಬೇಕು. ನಿಮಾರ್ಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಎಚ್ಪಿವಿ ಲಸಿಕೆ ಕಡ್ಡಾಯವಲ್ಲ
ಬಾಲಕಿಯರಿಗೆ ನೀಡಲಾಗುತ್ತಿರುವ ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟುವ ಎಚ್ಪಿವಿ ಲಸಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ ಅದನ್ನು ಶೇ.100ರಷ್ಟು ಕಡ್ಡಾಯಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಜನಜಾಗೃತಿ ಮೂಡಿಸುವ ಮೂಲಕ ಮಾಹಿತಿ ನೀಡಲಾಗುವುದು. ಅಂತಿಮವಾಗಿ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪೋಷಕರೇ ತೀಮಾರ್ನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಹೊಸ ಜಿಲ್ಲಾಸ್ಪತ್ರೆಗೆ ಅನುದಾನ
ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೊಸ ಉಪಕರಣಗಳು ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ನೂತನವಾಗಿ ಮೇಲ್ದರ್ಜೆಗೇರಿಸಲಾಗಿರುವ ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಉಪಕರಣ ಹಾಗೂ ಪೀಠೋಪಕರಣಗಳ ಕೊರತೆ ನೀಗಿಸಲು ತಕ್ಷಣವೇ ಅನುದಾನ ಕಾಯ್ದಿರಿಸಲಾಗುವುದು. ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆ ಹಾಗೂ ಸುಧಾರಣೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ತೀಮಾರ್ನ ಕೈಗೊಳ್ಳಲಾಗುವುದು ಎಂದರು.