ಮೆಸ್ಕಾಂ ಕೈಕಂಬ ಉಪವಿಭಾಗ ಜನಸಂಪರ್ಕ ಸಭೆ ಕೃಷ್ಣರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಲೋಹಿತ್ ಬಿ.ಎಸ್., ಸುನೀಲ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಅನಧಿಕೃತ ವಿದ್ಯುತ್ ಬಳಕೆಗೆ ಇಲ್ಲ ಅವಕಾಶ

ವಿಜಯವಾಣಿ ಸುದ್ದಿಜಾಲ ಗುರುಪುರ
ಮೆಸ್ಕಾಂ ಕೈಕಂಬ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಮೆಸ್ಕಾಂ ಅಧೀಕ್ಷಕ ಕೃಷ್ಣರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಬಡಗುಳಿಪಾಡಿ ಆದರ್ಶನಗರ ಮಳಲಿ ಕ್ರಾಸ್, 4ನೇ ಅಡ್ಡರಸ್ತೆಯ ನಿವಾಸಿಯೊಬ್ಬರು 10 ವರ್ಷದ ಹಿಂದೆ ಕೃಷಿಗೆ ಮಂಜೂರಾಗಿರುವ ಉಚಿತ ವಿದ್ಯುತನ್ನು ತನ್ನ 12 ಬಾಡಿಗೆ ಮನೆಗಳಿಗೆ ಉಪಯೋಗಿಸುತ್ತಿದ್ದಾರೆ. ಈ ಮೂಲಕ ಬಾಡಿಗೆ ಮನೆಯವರಿಂದ ಪ್ರತಿ ತಿಂಗಳು ಸುಮಾರು 40-50 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಕಳೆದ ತಿಂಗಳು ಮೆಸ್ಕಾಂ ವಿಚಕ್ಷಣ ದಳ ದಾಳಿ ಮಾಡಿ ದಾಖಲೆಗಳ ಬಗ್ಗೆ ಆಮೂಲಾಗ್ರ ಪರಿಶೀಲಿಸದೆ ಕೇವಲ 10 ಸಾವಿರ ರೂ. ದಂಡ ವಿಧಿಸಿದೆ. ಇದರಿಂದ ಮೆಸ್ಕಾಂಗೆ ನಷ್ಟ ಉಂಟಾಗಿದೆ. ಕಳೆದ 10 ವರ್ಷದಿಂದ ಕಾನೂನುಬಾಹಿರವಾಗಿ ವಿದ್ಯುತ್ ನಿರಂತರ ಬಳಕೆ ಮಾಡುತ್ತಿರುವ ಸದ್ರಿ ಮಾಲೀಕರಿಗೆ ಲಕ್ಷಕ್ಕೂ ಅಧಿಕ ದಂಡ ಶುಲ್ಕ ಹೇರಬೇಕು. ಬೋರ್‌ವೆಲ್‌ಗೆ ಉಚಿತ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಗಂಜಿಮಠ ಗ್ರಾಪಂ ನಿಕಟಪೂರ್ವ ಸದಸ್ಯ ಸುನೀಲ್ ಫರ್ನಾಂಡಿಸ್ ಆಗ್ರಹಿಸಿದರು.
ಅನಧಿಕೃತ ವಿದ್ಯುತ್ ಬಳಕೆಗೆ ಅವಕಾಶವಿಲ್ಲ. ದೂರು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ ಅಧೀಕ್ಷಕ ಕೃಷ್ಣರಾಜ್, ಬಾಡಿಗೆ ಮನೆಗಳಿಗೆ ಸಂಬಂಧಿಸಿದ ದಾಖಲೆ ಪತ್ರ ಒದಗಿಸುವಂತೆ ಫರ್ನಾಂಡಿಸ್‌ಗೆ ಸೂಚಿಸಿ, ದಾಖಲೆ ಪರೀಶಿಲಿಸಿ ಕ್ರಮ ಕೈಗೊಳ್ಳುವಂತೆ ಎಇಇಗೆ ನಿರ್ದೇಶಿಸಿದರು.
ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ಟಿಬೆಟ್ ಎಂಬಲ್ಲಿ ವಾಸಿಸುತ್ತಿರುವ ಅಂಗವಿಕಲ ಮಹಿಳೆಯ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಅಭ್ಯಂತರವಿಲ್ಲ. ಅದಕ್ಕಾಗಿ ಗ್ರಾಪಂನಿಂದ ಅಧಿಕೃತ ಅನುಮತಿ ಪತ್ರ ತರಬೇಕು ಎಂದು ಅಹ್ಮದ್ ಬಾವ, ಮೊಹಮ್ಮದ್ ಉಂಞಿ ಅವರಿಗೆ ಸೂಚಿಸಿದರು.
ಮೆಸ್ಕಾಂ ಕಾವೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್(ಇಇ) ಲೋಹಿತ್ ಬಿ.ಎಸ್., ಕೈಕಂಬ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ) ಸುನೀಲ್ ಮೊಂತೆರೊ, ಗುರುಪುರ ಕೈಕಂಬ ಜೆಇ ದೇವಿಪ್ರಸಾದ್, ಮುಚ್ಚೂರು ಜೆಇ ಶಿವರಾಮ, ಎಡಪದವು ಪ್ರಭಾರ ಜೆಇ ಪ್ರವೀಣ್ ಕುಮಾರ್, ಸಹಾಯಕ ಇಂಜಿನಿಯರ್ ಮನು ಕೆ.ಎಸ್., ಇಲಾಖೆ ಅಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರು, ಜನಪ್ರತಿನಿಧಿಗಳು, ವಿದ್ಯುತ್ ಬಳಕೆದಾರರು ಇದ್ದರು.

ಹೆದ್ದಾರಿ ಇಲಾಖೆಗೆ ಪತ್ರ

ಕೊಂಪದವಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಿಸಲು, ವಿಕಾಸನಗರದಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ಗೆಲ್ಲು ಕಡಿದು ಹಾಕಲು, ಹೆಚ್ಚುವರಿ ಬ್ಯಾನರ್ ಅಳವಡಿಸಿ ಜನಸಂಪರ್ಕ ಸಭೆಯ ಪ್ರಚಾರ ಹೆಚ್ಚಿಸಲು ಸೂಚಿಸಿದ ಮೆಸ್ಕಾಂ ಅಧೀಕ್ಷಕರು, ಗಂಜಿಮಠದಲ್ಲಿ ಹೆದ್ದಾರಿ ಪಕ್ಕದ ಬೀದಿ ದೀಪಗಳ ಕಂಬಗಳು ತೆರವಾದ ಬಳಿಕ ಪರ್ಯಾಯ ವ್ಯವಸ್ಥೆ ಮಾಡದಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.

ವಿದ್ಯುತ್ ಕಂಬಗಳ ದುರಸ್ತಿಗೆ ಮನವಿ

ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಬಡಗುಳಿಪಾಡಿ 3ನೇ ವಾರ್ಡ್‌ನಲ್ಲಿ ಸೈಟ್ ಮನೆಗಳಿಗೆ ಲೇಔಟ್ ಮಾದರಿಯಲ್ಲಿ ಹೆಚ್ಚುವರಿ ವಿದ್ಯುತ್ ಬಿಲ್ ಬಂದಿರುವ ಬಗ್ಗೆ ಪುನಃ ಪರಿಶೀಲಿಸುವಂತೆ ಆಗ್ರಹಿಸಿದ ತಾಪಂ ಮಾಜಿ ಸದಸ್ಯ, ಗಂಜಿಮಠ ಗ್ರಾಪಂ ನಿಕಟಪೂರ್ವ ಸದಸ್ಯ ಸುನೀಲ್ ಜಿ. ಮೊಗರು ಗ್ರಾಮದ ನಾರ್ಲದಲ್ಲಿರುವ ಯುವಕ ಮಂಡಲದ ಹತ್ತಿರದಲ್ಲಿ ವಿದ್ಯುತ್ ಕಂಬಗಳ ದುರಸ್ತಿ ಮಾಡುವಂತೆ ಮನವಿ ಮಾಡಿಕೊಂಡರು.