ಮೂಲ್ಕಿ ತಾಲೂಕು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರಿಸಲಾಯಿತು. ತಹಸೀಲ್ದಾರ್ ಪೃಥ್ವಿ ಸಾನಿಕಂ, ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕೆ.ಮೊದಲಾದವರಿದ್ದರು.  
ಉಡುಪಿ

ತ್ಯಾಜ್ಯ ನೀರು ಸಮಸ್ಯೆಗಿಲ್ಲ ಮುಕ್ತಿ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಕಾರ್ನಾಡಿನಿಂದ ಮೂಲ್ಕಿ ನಗರಕ್ಕೆ ತೆರಳುವ ಮುಖ್ಯ ರಸ್ತೆಯ ಬಳಿ ಚರಂಡಿಯಲ್ಲಿ ದುರ್ವಾಸನೆಯುಕ್ತ ತ್ಯಾಜ್ಯ ನೀರು ಹರಿಯುತ್ತಿದ್ದು, ಹಲವು ಬಾರಿ ದೂರಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ನಗರಾಡಳಿತ ಈ ಬಗ್ಗೆ ಕ್ರಮ ಕೈಗೊಂಡರೂ ಸಮಸ್ಯೆ ಸಂಪೂರ್ಣ ಪರಿಹಾರ ಕಂಡಿಲ್ಲ.
ರಸ್ತೆಯ ಬದಿಯಲ್ಲಿ ಹಳೆಯ ಬೃಹತ್ ಅಲದ ಮರದ ಬಿಳಲುಗಳಿಂದ ರಸ್ತೆ ಸಂಚಾರಕ್ಕೆ ಮತ್ತು ಪಕ್ಕದ ಮನೆಯವರಿಗೆ ತೀವ್ರ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಹೈಜೀನಿಯಸ್ ಅರಾನ್ಹಾ ಶನಿವಾರ ಮೂಲ್ಕಿ ತಾಲೂಕು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ದೂರಿದರು.
ಪ್ರತಿಕ್ರಿಯಿಸಿದ ಮೂಲ್ಕಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಸಭೆಯಲ್ಲಿದ್ದ ಅರಣ್ಯ ಇಲಾಖಾಧಿಕಾರಿಗಳ ಬಳಿ ಸಮಾಲೋಚಿಸಿ ಮರ ತೆರವು ಕಷ್ಟಸಾಧ್ಯವಾದ್ದರಿಂದ ಸಮಸ್ಯೆಯುಳ್ಳ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಲು ಸೂಚಿಸಿದರು. ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕೆ. ಈ ಬಗ್ಗೆ ತಕ್ಷಣ ಕ್ರಮದ ಭರವಸೆ ನೀಡಿದರು.
ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ನಿವಾಸಿ ಪದ್ಮನಾಭ ಎಂಬುವರು 2 ವರ್ಷಗಳಿಂದ ಹೊಸ ರೇಶನ್ ಕಾರ್ಡ್‌ಗಾಗಿ ಮನವಿ ಸಲ್ಲಿಸುತ್ತಿದ್ದರೂ ಕಾರ್ಡ್ ನೀಡುತ್ತಿಲ್ಲ. ಯಾವಾಗ ರೇಶನ್ ಕಾರ್ಡ್ ನೀಡುತ್ತೀರಿ ಎಂದು ಕೇಳಿದರು. ತಹಸೀಲ್ದಾರ್ ಪೃಥ್ವಿ ಸ್ಥಾನಿಕಂ ಸರ್ಕಾರದ ನಿರ್ದೇಶನ ಬಂದ ತಕ್ಷಣ ರೇಶನ್ ಕಾರ್ಡ್ ನೀಡಲಾಗುವುದು ಎಂದರು.
ಅತಿಕಾರಿಬೆಟ್ಟು ಗ್ರಾಮದ ದಿನೇಶ್ಚಂದ್ರ ಅಜಿಲ, ತಾನು ಈ ಹಿಂದೆ ಮೆಸ್ಕಾಂ ವಿದ್ಯುತ್ ತಂತಿ ಮತ್ತು ಆರ್‌ಟಿಸಿ ಗೊಂದಲಗಳ ಸಲ್ಲಿಸಿದ ಅರ್ಜಿಗಳ ಬಗ್ಗೆ ಪ್ರಶ್ನಿಸಿದರು. ಈ ಬಗ್ಗೆ 3 ದಿನದೊಳಗೆ ಉತ್ತರಿಸುವುದಾಗಿ ತಿಳಿಸಲಾಯಿತು.
ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮೂಲ್ಕಿ ತಾಲೂಕು ಇಒ ಅರ್ಚಿತ್ ಪರಾಗ್ ಡೋಂಗ್ರೆ, ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕೆ., ಮೂಲ್ಕಿ ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ಆರ್‌ಐ ಮೋಹನ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ವಿಎ ಆಶಾ ಮೆಹಂದಳೆ ನಿರ್ವಹಿಸಿದರು.