ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿದರು.
ಉಡುಪಿ: ಸದ್ಯಕ್ಕೆ ಸರ್ಕಾರಿ ಬಸ್ಸುಗಳ ದರ ಏರಿಕೆ ಪ್ರಸ್ತಾಪ ಇಲ್ಲ. ರಾಜ್ಯ ಸರ್ಕಾರದಲ್ಲಿ ಅನುಮತಿ ತೆಗೆದುಕೊಂಡವರು ಏಕಾಏಕಿ ಬಸ್ ದರ ಏರಿಕೆ ಮಾಡಲು ಸಾಧ್ಯವಿಲ್ಲ. ಖಾಸಗಿ ಬಸ್ ದರ ಶೇ. 20 ಏರಿಕೆ ವಿಚಾರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಲ್ಲಿ ನಿರ್ಧಾರ ಆಗಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲ್ ಇಂಡಿಯಾ ಪರ್ಮಿಟ್ ಹೈ ಎಂಡ್ ಬಸ್ಸುಗಳು ಏರಿಕೆ ಮಾಡುತ್ತಾರೆ. ಈ ಬಸ್ಸುಗಳು ನಮ್ಮನಿಯಂತ್ರಣದಲ್ಲಿಲ್ಲ ಎಂದು ಹೇಳಿದರು.
ಸಾರಿಗೆ ನೌಕರರ ಶೇ. 12.5 ವೇತನ ಪರಿಷ್ಕರಣೆ
ಸಾರಿಗೆ ನೌಕರರ 26 ತಿಂಗಳ ಹಿಂದಿನ ಬಾಕಿ ಮೊತ್ತ ಪಾವತಿಸಲಾಗುವುದು. ಶೇ. 12.5 ವೇತನ ಪರಿಷ್ಕರಣೆ ಮಾಡಲಾಗುವುದು. ನಮ್ಮ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗಿದ್ದು, ಸಾರಿಗೆ ನೌಕರರ ಮುಷ್ಕರ ವಿಚಾರ ಗಮನಕ್ಕೆ ಬಂದಿದೆ. ಹಿಂದೆ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗುತ್ತಿತ್ತು. 2020ರಲ್ಲಿ ಕೋರೋನಾ ಕಾರಣಕ್ಕೆ ವೇತನ ಪರಿಷ್ಕರಿಸಿಲ್ಲ. 2023ರಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾಗ ಶೇ. 15 ವೇತನ ಪರಿಷ್ಕರಣೆ ಮಾಡಿದರು. ಏಪ್ರಿಲ್ 1, 2023 ಜಾರಿಗೆ ಆದೇಶ ಮಾಡಿ ಹೋದರು. ಸಾರಿಗೆ ನೌಕರು 4 ವರ್ಷಕ್ಕೊಮ್ಮೆ ಆಗಲೇಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅನೇಕ ಬಾರಿ ಚರ್ಚೆಯಾಗಿದೆ ಎಂದು ಹೇಳಿದರು.
ಸಬ್ಸಿಡಿ ದರದಲ್ಲಿ ಅನಿಲ ನೀಡಿ
ಹಿಂದೆ ಯುಪಿಎ ಸರ್ಕಾರ ಇದ್ದಾಗ ಬ್ಯಾರಲ್ ಗೆ 130 ರಿಂದ -140 ಡಾಲರ್ ಇತ್ತು. ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟು ಕಡಿಮೆ ದರದಲ್ಲಿ ಪೆಟ್ರೋಲ್ ಕೊಡುತ್ತಿದ್ದರು. ಮೋದಿ ಸರ್ಕಾರ ಎಲ್ಲಾ ಸಬ್ಸಿಡಿ ತೆಗೆದು ಹಾಕಿದೆ. ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದಾಗಲೂ ಗ್ರಾಹಕರಿಗೆ ಅದರ ಲಾಭ ಸಿಗಲಿಲ್ಲ. ಈಗಲೂ ಕೂಡ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟು ಜನರಿಗೆ ಡೀಸೆಲ್, ಗ್ಯಾಸ್ ,ಪೆಟ್ರೋಲ್ ಕೊಡಬೇಕು ಎಂದರು.