ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಡ್ಯಾಂ. 
ಉಡುಪಿ

ಉಡುಪಿಗೆ 'ಬಜೆ' ಭರವಸೆ

* ಡ್ಯಾಂನಲ್ಲಿದೆ ಜೂ.30ರ ವರೆಗೆ ಸಾಕಾಗುವಷ್ಟು ನೀರು

* ಜಲ ಬಳಸುವಾಗ ಇರಲಿ ಬಲು ಹುಷಾರು

ಪ್ರಶಾಂತ ಭಾಗ್ವತ ಉಡುಪಿ
ಕರಾವಳಿಯೂ ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ಝಳ ವಿಪರೀತವಾಗುತ್ತಿದ್ದು, ಸೆಕೆಯ ತೀವ್ರತೆಯೂ ಹೆಚ್ಚುತ್ತಿದೆ. ಹಲವೆಡೆ ಕುಡಿಯುವ ನೀರಿನ ಸಮಸ್ಯೆಯೂ ಆರಂಭಗೊಂಡಿದ್ದು, ಉಡುಪಿ ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ.
ನಗರಕ್ಕೆ ನೀರು ಪೂರೈಸುವ ಬಜೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದರೂ ಸಹ ಜೂ.30ರ ವರೆಗೆ ಪೂರೈಕೆಯಲ್ಲಿ ಯಾವುದೇ ತೊಡಕಾಗದು. 3 ವರ್ಷದ (2023ರಲ್ಲಿ) ಹಿಂದೆ ಮಳೆ ಕೊರತೆಯಾಗಿದ್ದರಿಂದ 2024ರ ಮೇ ತಿಂಗಳ 2ನೇ ವಾರದಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಆದರೆ, ಈ ಬಾರಿ ಮಳೆಗಾಲದವರೆಗೂ ಬಜೆ ಡ್ಯಾಂ 'ನೀರಿನ ಭರವಸೆ' ಒದಗಿಸಿದೆ.

ಡ್ಯಾಂನಲ್ಲಿದೆ ಸಾಕಷ್ಟು ನೀರು

ಬಜೆ ಅಣೆಕಟ್ಟೆಯ ನೀರು ಸಂಗ್ರಹ ಸಾಮರ್ಥ್ಯ 4.90 ಸೆಂ.ಮೀ. (ಎತ್ತರದಲ್ಲಿ) ಇದೆ. ಪ್ರಸ್ತುತ 3.30 ಸೆಂ.ಮೀ. ನೀರು ಸಂಗ್ರಹವಿದೆ. ಮಳೆಗಾಲದ ಬಳಿಕ ಈವರೆಗೆ 1.06 ಸೆಂ.ಮೀ. ನೀರು ಖಾಲಿಯಾಗಿದೆ. ಹೀಗಾಗಿ ಕಳೆದ ವರ್ಷದಂತೆ ಈ ವರ್ಷವೂ ಸಹ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದು. ಕಳೆದ ಮಳೆಗಾಲದಲ್ಲಿ ಅಣೆಕಟ್ಟೆಯ ಗೇಟ್​ನ ಮೇಲ್ಭಾಗದಲ್ಲಿ ಉಸುಕಿನ ಚೀಲವಿಟ್ಟು ಕೃತಕವಾಗಿ 6.10 ಸೆಂ.ಮೀ. ವರೆಗೆ ಎತ್ತರಿಸಿ ನೀರಿನ ಮಟ್ಟ ಹೆಚ್ಚಿಸಿ ಹೆಚ್ಚುವರಿ ನೀರು ಸಂಗ್ರಹ ಮಾಡಿಕೊಳ್ಳಲಾಗಿತ್ತು. 

ಆಡಳಿತದಿಂದ ಅಗತ್ಯ ವ್ಯವಸ್ಥೆ

ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ನಗರಸಭೆ ವತಿಯಿಂದ ಅಗತ್ಯ ವ್ಯವಸ್ಥೆ ಮಾಡಿಟ್ಟುಕೊಳ್ಳಲಾಗುತ್ತದೆ. ನಗರಸಭೆಯ ಅಧೀನದಲ್ಲಿ 25ಕ್ಕೂ ಅಧಿಕ ಬೋರ್ವೆಲ್​, 10ಕ್ಕೂ ಅಧಿಕ ಬಾವಿ ಇದೆ. ಅಲ್ಲದೆ, ಖಾಸಗಿಯವರ ಬೋರ್ವೆಲ್​ಗಳನ್ನು ಸಹ ಒಪ್ಪಂದ ಮಾಡಿಕೊಂಡು ನೀರು ಪೂರೈಕೆ ಮಾಡಲು ನಗರಸಭೆ ಸಿದ್ಧತೆ ಮಾಡಿಕೊಂಡಿರುತ್ತದೆ. 

ಜಿಲ್ಲೆಯಲ್ಲೂ ಸದ್ಯಕ್ಕಿಲ್ಲ ಜಲ ಸಮಸ್ಯೆ

ಉಡುಪಿ ನಗರದಲ್ಲಷ್ಟೇ ಅಲ್ಲದೆ ಜಿಲ್ಲೆಯಲ್ಲೂ ಸಹ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಆದರೆ, ಪೆರ್ಡೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದ್ದು, ಟೆಂಡರ್​ ಕರೆದು, ಟ್ಯಾಂಕರ್​ ಮೂಲಕ ನೀರು ಪೂರೈಸಲಾಗುತ್ತಿದೆ. ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ಸಮಸ್ಯೆ ಕಂಡುಬಂದಿದ್ದು ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಆದಲ್ಲಿ ಜಿಲ್ಲಾಡಳಿತದ ಸ್ಥಿರ ಸಹಾಯವಾಣಿ ಸಂಖ್ಯೆ 0820-2574802 ಹಾಗೂ ಉಡುಪಿ ನಗರದಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ ನಗರಸಭೆಯ ಸಹಾಯವಾಣಿ 8749066111 ಕರೆ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ತಿಳಿಸಿದ್ದಾರೆ. ಉಡುಪಿ ತಾಲೂಕಿನಲ್ಲಿ ನೀರಿನ ಸಮಸ್ಯೆಯಾದಲ್ಲಿ ಶಾಸಕರ ಕಚೇರಿ ಸಹಾಯವಾಣಿ 9019566366 ಕರೆ ಮಾಡಬಹುದು ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಬಳಕೆದಾರರ ಅಂಕಿ-ಅಂಶ

ಮಾದರಿ                      ಸಂಪರ್ಕ ಸಂಖ್ಯೆ 
ಮನೆ                            19,740
ವಾಣಿಜ್ಯ                         1,678
ಕೈಗಾರಿಕೆ                        37
ಗೃಹೇತರ                        31 
ಗ್ರಾಪಂ (8)                     22
ಒಟ್ಟು                            21,508
"

ಉಡುಪಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜೂ.30ರ ವರೆಗೂ ಪೂರೈಕೆ ಮಾಡುವಷ್ಟು ನೀರು ಬಜೆ ಡ್ಯಾಂನಲ್ಲಿ ಲಭ್ಯವಿದ್ದು 24×7 ಪೂರೈಕೆ ಮಾಡಲಾಗುತ್ತಿದೆ. ವಾರಾಹಿ ಎಡದಂಡೆ ನಾಲೆಯಿಂದ ನಿತ್ಯ 45 ಎಂಎಲ್​ಡಿ ನೀರು ಉಡುಪಿ ನಗರಕ್ಕೆ ಪೂರೈಕೆ ಆಗುತ್ತಿದೆ. ಈ ಯೋಜನೆಯಲ್ಲಿ ಮಣಿಪಾಲ ಭಾಗವೂ ಸೇರಿ ಸುಮಾರು 25 ಸಾವಿರ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ನೀರು ಲಭ್ಯವಿದೆಯೆಂದು ಸಾರ್ವಜನಿಕರು ಅನಗತ್ಯವಾಗಿ ಪೋಲು ಮಾಡಬಾರದು. ಹಿತ-ಮಿತವಾಗಿ ನೀರು ಬಳಸಬೇಕು. ನೀರಿನ ಕೊರತೆ ಕಂಡುಬಂದಲ್ಲಿ ರೇಶನಿಂಗ್ ವ್ಯವಸ್ಥೆ ಆರಂಭಿಸಲಾಗುವುದು.

— ಮಹಾಂತೇಶ್​ ಹಂಗರಗಿ. ಉಡುಪಿ ನಗರಸಭಾ ಪೌರಾಯುಕ್ತ.