ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ) ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಸುದ್ದಿಗೋಷ್ಠಿ
ಉಡುಪಿ: ಆರ್.ಟಿ.ಓ. ಕಚೇರಿಯಲ್ಲಿ ಸುಮಾರು 8 ತಿಂಗಳಿನಿಂದ ವಾಹನದ ನಿರಾಕ್ಷೇಪಣಾ ಪತ್ರ (ಸಿಸಿ) ನೀಡದೆ ಸತಾಯಿಸಲಾಗುತ್ತಿದ್ದು, ಇದರಿಂದ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. 15 ದಿನಗಳೊಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡದಿದ್ದರೆ ಆರ್.ಟಿ.ಓ. ಕಚೇರಿಯ ಮುಂದೆ ಅರ್ನಿಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ) ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ಕ್ಕಿಂತ ಮೊದಲಿನ ವಾಹನದ ಆರ್.ಸಿ. ಪತ್ರದಲ್ಲಿ ವೀಲ್ ಬೆಸ್ ಹಾಗೂ ಎಚ್.ಪಿ. ನಮೂದಿಸಿಲ್ಲ. ಹಾಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಕಾರಣ ನೀಡುತ್ತಿದ್ದಾರೆ. ಈ ಲೋಪಕ್ಕೆ ಸರ್ಕಾರ ಜವಾಬ್ದಾರಿ. ಆದರೆ ವಾಹನ ಮಾಲೀಕರನ್ನು ಬಲಿಪಶು ಮಾಡುವುದು ಸರಿಯಲ್ಲ. ಪಕ್ಕದ ಜಿಲ್ಲೆಗಳಲ್ಲಿ 580 ರೂ. ಶುಲ್ಕ ಕಟ್ಟಿಸಿಕೊಂಡು ಆರ್.ಟಿ.ಓ. ನಿರೀಕ್ಷಕರು ಮೊಬೈಲ್ ಆಪ್ನಲ್ಲಿಯೇ ಬಿಟ್ಟುಹೋಗಿರುವ ಅಂಶಗಳನ್ನು ತುಂಬಿಸಿ ಕೇವಲ 5 ದಿನಗಳಲ್ಲಿ ಪತ್ರವನ್ನು ತರಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಆರ್.ಟಿ.ಓ. ಅಧಿಕಾರಿಗಳಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಲಾಲ್, ಮಹಿಳಾ ಸಮಿತಿ ಅಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷರಾದ ಸೈಯದ್ ನಿಜಾಮ್, ಸುಧೀರ್ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಸತೀಶ್ ಸನಿಲ್, ಮಹಿಳಾ ಸಮಿತಿ ಉಪಾಧ್ಯಕ್ಷೆ ದೇವಕಿ ಬರ್ಕೂರು ಉಪಸ್ಥಿತರಿದ್ದರು.