ಉಡುಪಿಯ ಪೆರಂಪಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರಾದ ಆಚಾರಿಬೆಟ್ಟು ಪದ್ದು ಪೂಜಾರಿ, ಮದಗ ನಾಗಪ್ಪ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ರವೀಂದ್ರ ಪೂಜಾರಿ, ಡಾ. ಭಗಿನಿ ಕ್ರಿಸಿಯಾ ಲೋರಾ ಪಿಂಟೋ, ಸತೀಶ್ ಬಿ., ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ್ ಭಟ್, ಶ್ರೀನಿವಾಸ್ ಬಲ್ಲಾಳ್ ಮಲ್ಲಂಪಳ್ಳಿ, ಅಂತಪ್ಪ ಪೂಜಾರಿ ಪೆರಂಪಳ್ಳಿ, ಪಿ.ಎನ್. ಶಶಿಧರ್ ರಾವ್ ಪೆರಂಪಳ್ಳಿ ಇತರರಿದ್ದರು.
* ಡಾ. ಭಗಿನಿ ಕ್ರಿಸಿಯಾ ಲೋರಾ ಪಿಂಟೋ ಅಭಿಮತ
* ಉಡುಪಿಯ ಪೆರಂಪಳ್ಳಿಯಲ್ಲಿ ರೈತ ದಿನಾಚರಣೆ
ಉಡುಪಿ: ಕೃಷಿಗೆ ಹಾಗೂ ಕೃಷಿಕರಿಗೆ ಆದರ, ಗೌರವ ತೋರದ ಆಧುನಿಕ ಜಗತ್ತಿನಲ್ಲಿ ಥಳುಕು ಬಳುಕು ಜೀವನ, ಕೋಟ್ಯಂತರ ಹಣ, ಆಸ್ತಿ , ಪ್ರತಿಷ್ಠೆ, ಅಂತಸ್ತು ಎಷ್ಟೇ ಇದ್ದರೂ ಉಣ್ಣಲು ರೈತ ಬೆಳೆದ ಅನ್ನವೇ ಬೇಕು. ಅದಲ್ಲದೆ, ಯಾವ ಸಂಪತ್ತೂ ಸಹ ನಮ್ಮ ಹೊಟ್ಟೆ ತುಂಬಿಸದು. ರೈತ ಭೂತಾಯಿಯ ಮಡಿಲಲ್ಲಿ ಅನ್ನ ಬೆಳೆಯುತ್ತಾನೆಯೇ ಹೊರತು ಯಾವ ವಿಜ್ಞಾನಿಯೂ ಅದನ್ನು ಸೃಷ್ಟಿಸಲಾರ ಎಂದು ಮಿಶಾ-ಮಾಹೆ ಮಣಿಪಾಲದ ಡಾ. ಭಗಿನಿ ಕ್ರಿಸಿಯಾ ಲೋರಾ ಪಿಂಟೋ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಪೆರಂಪಳ್ಳಿ ಬೊಬ್ಬರ್ಯ ಕಟ್ಟೆ ಸಭಾಭವನದಲ್ಲಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ಹಾಗೂ ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಮತ್ತು ಕೃಷಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿಯ ಸದಸ್ಯ ಸತೀಶಕುಮಾರ್ ಮತ್ತು ಪೆರಂಪಳ್ಳಿಯ ಪ್ರಗತಿಪರ ಕೃಷಿಕ ಫೆಡ್ರಿಕ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಹಿರಿಯ ಕೃಷಿಕರಿಗೆ ಸನ್ಮಾನ
ಪೆರಂಪಳ್ಳಿ ವಲಯದ ಹಿರಿಯ ಹಾಗೂ ಪ್ರಗತಿಪರ ಕೃಷಿಕರಾದ ಆಚಾರಿಬೆಟ್ಟು ಪದ್ದು ಪೂಜಾರಿ ಹಾಗೂ ಮದಗ ನಾಗಪ್ಪ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಅಶಕ್ತ ಹಿರಿಯ ಕೃಷಿಕ ಎಲೆಬೈಲು ಹೆಂಡ್ರಿ ಸಾಲ್ವದರ್ ಡಿಸೋಜಾ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು.
ಕೃಷಿಕರಿಗೆ ಇಲಾಖೆಯಿಂದ ಲಭಿಸುವ ಸೇವಾ ಸೌಲಭ್ಯಗಳ ಕುರಿತು ಸಹಾಯಕ ಕೃಷಿ ನಿರ್ದೇಶಕ ಸತೀಶ್ ಬಿ. ಮಾಹಿತಿ ನೀಡಿದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್, ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್ ಮಲ್ಲಂಪಳ್ಳಿ, ಅಂತಪ್ಪ ಪೂಜಾರಿ ಪೆರಂಪಳ್ಳಿ, ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್. ಶಶಿಧರ್ ರಾವ್ ಪೆರಂಪಳ್ಳಿ, ಹಿರಿಯ ಕೃಷಿಕ ಶಂಕರ ಕೋಟ್ಯಾನ್ ಪೆರಂಪಳ್ಳಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ರಾಜೇಶ್, ಶಾಂತಿ ಡಿಸೋಜಾ, ರೋಸಿ ಪಿಂಟೋ, ಹೆಲೆನ್ ಬ್ರಿಟ್ಟೋ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಸ್ವಾಗತಿಸಿದರು.