ಕುಂದಾಪುರ ಶಾಸಿ ವೃತ್ತದ ಅಂಡರ್​ ಪಾಸ್​ ಅಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಲಸೆ ಕಾರ್ಮಿಕರು. 
ಉಡುಪಿ

ನಗರ ಕಟ್ಟುವ ವಲಸೆ ಕಾರ್ಮಿಕರಿಗಿಲ್ಲ ವಸತಿ!

ಸೌಮ್ಯ ಆರ್

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ
  • ಸ್ಥಳಿಯಾಡಳಿತ, ಅಧಿಕಾರಿಗಳು ಮೌನ
  • ಹೆದ್ದಾರಿ ಬದಿ ಠಿಕಾಣಿ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಬೀದಿ ಬದಿಯಲ್ಲಿ ಮಲಗುತ್ತಿರುವುದು, ರಸ್ತೆ ಡಿವೈಡರ್​ಗಳ ಮೇಲೆ ಬಟ್ಟೆ ಒಣಗಿಸುತ್ತಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಹುಡುಕುತ್ತಿರುವುದು... ಇದು ಕುಂದಾಪುರದಲ್ಲಿ ವಲಸೆ ಕಾರ್ಮಿಕರ ಸ್ಥಿತಿ.
ಉತ್ತರ ಕರ್ನಾಟಕ ಭಾಗದಿಂದ ಕೂಲಿಗಾಗಿ ನಗರ ವ್ಯಾಪ್ತಿಯಲ್ಲಿ ನೆಲೆಗೊಂಡಿರುವ ವಲಸೆ ಕಾರ್ಮಿಕರು ಸೂಕ್ತ ನೆಲೆ ಸಿಗದೆ ಕಂಗೆಟ್ಟಿದ್ದಾರೆ. ಫ್ಲೆ ಓವರ್​ ಕೆಳಗಡೆ, ನೆಹರು ಮೈದಾನದಲ್ಲಿ ರಾತ್ರಿ ಕಳೆಯುತ್ತಿದ್ದ ಕಾರ್ಮಿಕರನ್ನು ಆಡಳಿತ ತೆರವುಗೊಳಿಸಿದ ನಂತರ ಎಲ್ಲೆಂದರಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ತೆರವುಗೊಂಡ ಕಾರ್ಮಿಕರಿಗೆ ನೆಲೆಯೊದಗಿಸುವ ಸ್ಥಳಿಯಾಡಳಿತ ಮತ್ತು ಸಂಬಂಧಿತ ಇಲಾಖೆ ಭರವಸೆ ಹುಸಿಯಾಗಿದೆ.
*ಹೆದ್ದಾರಿ ಬದಿ ಠಿಕಾಣಿ: ಸರ್ವೀಸ್​ ರಸ್ತೆಯ ಚರಂಡಿ ಮೇಲ್​ಹಾಸು, ಅಂಗಡಿ ಮುಂಗಟ್ಟುಗಳ ಎದುರಿನ ಜಾಗದಲ್ಲಿ ನೂರಾರು ಕಾರ್ಮಿಕರು ರಾತ್ರಿ ಕಳೆಯುತ್ತಿದ್ದಾರೆ. ಸುರಕ್ಷತೆ ಎಂಬುವುದಿಲ್ಲ. ಹಲವರು ವಾಹನ ಅವಡಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಅವರು ರಾತ್ರಿ ಕಳೆಯುವ ಸ್ಥಳ ಮಲಮೂತ್ರಾದಿಗಳ ಗುಡಾರ ಆಗುತ್ತಿದ್ದು, ಸ್ಥಳಿಯರು ವೃಥಾ ಅದ್ವಾನ ಎದುರಿಸುವಂತಾಗಿದೆ.

ಸುರಕ್ಷತೆ ಮರೀಚಿಕೆ

ನೆಹರು ಮೈದಾನಕ್ಕೆ ಹೊಂದಿಕೊಂಡಿರುವ ವಡೇರಹೋಬಳಿ ಪ್ರೌಢಶಾಲೆ, ಮೈದಾನದ ಎದುರಿನ ಸರ್ವೀಸ್​ ರಸ್ತೆಗೆ ಹೊಂದಿಕೊಂಡಿರುವ ಚರಂಡಿಯ ಮೇಲ್​ಹಾಸು, ಆಚೆ ಈಚೆಗಿನ ಅಂಗಡಿ ಮುಂಗಟ್ಟುಗಳು ಕಾರ್ಮಿಕರ ವಾಸಸ್ಥಾನ ಆಗಿದೆ. ದಿನವಿಡೀ ಶ್ರಮ ವಹಿಸಿ ದುಡಿದು ಬಂದು ಹೆದ್ದಾರಿ ಬದಿ ಗಾಢ ನಿದ್ರೆಯಲ್ಲಿರುವ ಹೊತ್ತಲ್ಲಿ ಅಪಾಯಕ್ಕೆ ಸಿಲುಕುವಂತಾಗಿದೆ.
ಕುಂದಾಪುರ ಶಾಸಿ ವೃತ್ತದ ಅಂಡರ್​ ಪಾಸ್​ ಅಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಲಸೆ ಕಾರ್ಮಿಕರು.

600ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಇಲ್ಲಿದ್ದಾರೆ. ಅವರಿಗೆ ಮೂಲಸೌಕರ್ಯ ಕಲ್ಪಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಕಾರ್ಮಿಕರ ತೆರವು ಪ್ರಕ್ರಿಯೆ ನಂತರ ನೆಲೆಯೊದಗಿಸಿಕೊಡುವ ಭರವಸೆ ಈಡೇರಿಲ್ಲ. ಅವರಿಗೆಂದೇ ರೂಪಿಸಿದ ಶೆಲ್ಟರ್​ ಕೂಡ ಉಪಯೋಗಕ್ಕಿಲ್ಲ. ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಸಂಕಷ್ಟದಲ್ಲಿ ದಿನ ಕಳೆಯುವಂತಾಗಿದೆ. ನ್ಯಾಯಾಲಯವೇ ಸ್ಪಷ್ಟವಾಗಿ ವಲಸೆ ಕಾರ್ಮಿಕರ ವಾಸ್ತವ್ಯಕ್ಕೆ ಶೆಲ್ಟರ್​ಗಳನ್ನು ನಿರ್ಮಿಸಿ, ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿರುವಾಗಲೂ ಇಂದಿಗೂ ಸ್ಥಳಿಯಾಡಳಿತ ತಲೆಕೆಡಿಸಿಕೊಳ್ಳದಿರುವುದು ಅತ್ಯಂತ ವಿಷಾದನೀಯ.
ಸ್ಥಳಿಯಾಡಳಿತ ಮತ್ತು ಜನಪ್ರತಿನಿಧಿಗಳು ಇನ್ನಾದರೂ ಕುಂದಾಪುರ ಸೇರಿದಂತೆ ಎಲ್ಲ ನಗರಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಶಾಶ್ವತ ಶೆಲ್ಟರ್​ ಹೋಮ್​ಗಳು, ಶೌಚಗೃಹ, ಕುಡಿಯುವ ನೀರು, ಆರೋಗ್ಯ ಸೌಲಭ್ಯ ಮತ್ತು ಭದ್ರತಾ ವ್ಯವಸ್ಥೆ ಒದಗಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೆಲ್ಟರ್​ ಮೂಲೆಗುಂಪು

ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ, ಹೋಟೆಲ್​ ಕೆಲಸ, ಮಾರುಕಟ್ಟೆ ಹೊರೆ ಹೊರುವುದು, ಲಾರಿಗಳ ಲೋಡ್​ ಅನ್​ಲೋಡ್​, ಅನೇಕ ೇತ್ರಗಳಲ್ಲಿ ದುಡಿಯುವವರು ಇದೇ ವಲಸೆ ಕಾರ್ಮಿಕರು. ಆದರೆ ದಿನಪೂರ್ತಿ ದುಡಿದು ನಗರ ಕಟ್ಟುವ ಕೈಗಳಿಗೆ ರಾತ್ರಿ ಮಲಗಲು ಸುರತ ಛಾವಣಿಯೇ ಇಲ್ಲದಿರುವುದು ಸರ್ಕಾರಿ ವ್ಯವಸ್ಥೆಯನ್ನು ಅಣಕಿಸುವಂತಿದೆ. ವಲಸೆ ಕಾರ್ಮಿಕರಿಗೆ ನೆಲೆ ಒದಗಿಸಲು 2017ರಲ್ಲಿ ಸಹಾಯಕ ಕಮಿಷನರ್​ ಶಿಲ್ಪಾನಾಗ್​ ಹೊಸ ಬಸ್​ ನಿಲ್ದಾಣದಲ್ಲಿ ಪುರಸಭೆ ವಾಣಿಜ್ಯ ಸಂಕೀರ್ಣದ ಮೇಲ್ಗಡೆ ಶೆಲ್ಟರ್​ ನಿರ್ಮಿಸಿದ್ದರು. ಸದ್ಯ ಅದು ಮೂಲೆಗುಂಪಾಗಿದೆ.

ವಲಸೆ ಕಾರ್ಮಿಕರಿಗೆ ಸದ್ಯ ಬೀದಿಯೇ ಗತಿಯಾಗಿದೆ. ಪುನರ್ವಸತಿ ಭರವಸೆ ಈಡೇರಿಲ್ಲ. ನಗರದ ನಾನಾ ವಾರ್ಡ್​ನ ರಸ್ತೆ ಅಂಚು ರಾತ್ರಿ ಕಳೆಯುವ ತಾಣವಾಗಿದೆ. ವಲಸೆ ಕಾರ್ಮಿಕರ ವಾಸ್ತವ್ಯಕ್ಕೆ ಶೆಲ್ಟರ್​ಗಳನ್ನು ನಿರ್ಮಿಸಿ, ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಸಂಬಂಧಪಟ್ಟವರು ವಲಸೆ ಕಾರ್ಮಿಕರ ಹಿತರಕ್ಷಣೆಗೆ ಕ್ರಮ ವಹಿಸಬೇಕು.

— ಸಂತೋಷ, ಕುಂದಾಪುರ ಪುರಸಭೆ ಮಾಜಿ ಸದಸ್ಯ