ಮಣಿಪಾಲದಲ್ಲಿ ಆಯೋಜಿಸಿದ್ದ 'ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್' ಕಾರ್ಯಾಗಾರವನ್ನು ಟಿ. ಸತೀಶ್ ಯು. ಪೈ ಉದ್ಘಾಟಿಸಿದರು. ಸಿ.ಆರ್. ಜನಾರ್ದನ್, ಡಾ. ಸುರ್ಜಿತ್ ಸಿಂಗ್ ಪಾಬ್ಲಾ, ಬಿ.ಆರ್. ಅಶೋಕಕುಮಾರ್, ಮುಜೀಬ್ ಕೆ.ಎ., ಪಿ.ವಿ. ಸತೀಶಕುಮಾರ್, ಪ್ರಕಾಶ್ ಬಾಬು, ಸತೀಶ್ ನಾಯಕ್, ದಿನಕರ ಹೇರೂರು, ಎಂ.ಮಹೇಶಕುಮಾರ್ ಇದ್ದರು.
* ಸಂಘದ ಮಾಜಿ ಅಧ್ಯಕ್ಷ ಸಿ.ಆರ್. ಜನಾರ್ದನ್ ವಿಷಾದ
* ಮಣಿಪಾಲದಲ್ಲಿ 'ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್' ಕಾರ್ಯಾಗಾರ
ಉಡುಪಿ: ಎಲ್ಲ ಮುದ್ರಣ ಸಂಸ್ಥೆಗಳೂ ಸಹ ಉದ್ಯಮವೆಂದು ಗುರುತಿಸಲ್ಪಟ್ಟಿದ್ದರೂ ಸಹ ಸಾಮಾಜಿಕವಾಗಿಯೇ ಸೇವೆ ಸಲ್ಲಿಸುವ ವಿಶಿಷ್ಟ ಘಟಕಗಳಾಗಿವೆ. ಪ್ರಮುಖವಾಗಿ ಶಿಕ್ಷಣ, ನ್ಯಾಯಾಂಗ, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳಿಗೂ ಸಹಕಾರಿಯಾಗಿ ಮುದ್ರಣ ಸಂಸ್ಥೆ ಕೆಲಸ ಮಾಡುತ್ತಿದೆ. ರಾಜ್ಯಾದ್ಯಂತ 12 ಸಾವಿರಕ್ಕೂ ಅಧಿಕ ಮುದ್ರಣಾಲಯವಿದ್ದು, ಆಳುವ ಸರ್ಕಾರ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಪ್ರಿಂಟಿಂಗ್ ಪ್ರೆಸ್ನವರ ಕುಂದು-ಕೊರತೆ ಕೇಳುವವರಿಲ್ಲ ಎಂದು ಕರ್ನಾಟಕ ಪ್ರಿಂಟರ್ಸ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಸಿ.ಆರ್. ಜನಾರ್ದನ್ ವಿಷಾದ ವ್ಯಕ್ತಪಡಿಸಿದರು.
ಮಣಿಪಾಲದ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲೀಕರ ಸಂಘದ ವತಿಯಿಂದ ರಾಜ್ಯ ಮುದ್ರಣಾಲಯಗಳ ಸಂಘ, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ನ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗ, ಮಣಿಪಾಲ ಸ್ಕಿಲ್ ಡೆವೆಲೆಪ್ಮೆಂಟ್ ಸೆಂಟರ್ (ಎಂಎಸ್ ಡಿಸಿ) ವತಿಯಿಂದ ಶುಕ್ರವಾರ (ಡಿ.12) ಆಯೋಜಿಸಿದ್ದ ಎರಡು ದಿನಗಳ 'ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025' ಕಾರ್ಯಾಗಾರದಲ್ಲಿ ಮಾತನಾಡಿದರು.
ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ, ಕಾರ್ಯಾಗಾರ ಉದ್ಘಾಟಿಸಿ ಶುಭ ಹಾರೈಸಿದರು.
ಸವಾಲುಗಳೂ ಇವೆ ಬಹಳ
ಮಣಿಪಾಲ ಎಂಎಸ್ಡಿಸಿ ಮುಖ್ಯಸ್ಥ ಬ್ರಿ. ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಮಾತನಾಡಿ, ಮುದ್ರಣ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನ ಬರುತ್ತಿದ್ದು ಅನೇಕ ಬದಲಾವಣೆಯೂ ಆಗಿದೆ. ತಂತ್ರಜ್ಞಾನದ ವೇಗಕ್ಕೆ ಸರಿಯಾಗಿ ಹಾಗೂ ಎಲ್ಲ ಸವಾಲು ಎದುರಿಸುವ ನಿಟ್ಟಿನಲ್ಲಿ ಮುದ್ರಣಕಾರರೂ ಸಹ ಬದಲಾಗಬೇಕಿದೆ. ಪ್ರಿಂಟಿಂಗ್ ಟೆಕ್ನಾಲಜಿಯ ಪಠ್ಯ ರೂಪಿಸುವಾಗಲೇ ಇಂತಹ ವಿಷಯ ತಿಳಿದು ಹೊಸದಾಗಿ ರಚಿಸಬೇಕಾಗದ ಅಗತ್ಯತೆ ಇದೆ ಎಂದರು.
ರಾಜ್ಯ ಮುದ್ರಣಾಲಯಗಳ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ಅಶೋಕಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಐಎಫ್ಎಂಪಿ ಉಪಾಧ್ಯಕ್ಷ ಮುಜೀಬ್ ಕೆ.ಎ., ಜಂಟಿ ಕಾರ್ಯದರ್ಶಿ ಪಿ.ವಿ. ಸತೀಶಕುಮಾರ್, ರಾಜ್ಯಸಮಿತಿಯ ಪ್ರಕಾಶ್ ಬಾಬು, ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ರಜನಿ, ಜಿಲ್ಲಾ ಮುದ್ರಣಾಲಯಗಳ ಸಂಘದ ಅಧ್ಯಕ್ಷ ಸತೀಶ್ ನಾಯಕ್, ಸಮಿತಿಯ ಕೋ-ಚೇರ್ಮನ್ಎ.ಎಂ. ಪ್ರಕಾಶ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಯು. ಮೋಹನ್ ಉಪಾಧ್ಯ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷ ಎಂ.ಮಹೇಶಕುಮಾರ್ ಸ್ವಾಗತಿಸಿದರು. ಕೋ-ಚೇರ್ಮನ್ ಅಶೋಕ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಂಶುಮಂತ್ ಜೋಶಿ ವಂದಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ಗಮನ ಸೆಳೆದ ಮಳಿಗೆ
ಎರಡು ದಿನಗಳ ಕಾರ್ಯಾಗಾರದ ಹಿನ್ನೆಲೆಯಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಹೊಸ ತಂತ್ರಜ್ಞಾನದ ಪ್ರಿಂಟಿಂಗ್ ಯಂತ್ರ, ಹೊಸ ಪ್ರಿಂಟರ್ಗಳು ಗಮನ ಸೆಳೆದವು. ಮುದ್ರಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರದರ್ಶನವನ್ನೂ ಮಳಿಗೆಯಲ್ಲಿ ಏರ್ಪಡಿಸಲಾಗಿತ್ತು.
ಬೆಂಗಳೂರಿನಲ್ಲಿ 65 ಎಕರೆ ಜಾಗದಲ್ಲಿ ಪ್ರಿಂಟಿಂಗ್ ಟೆಕ್ ಪಾರ್ಕ್ ನಿರ್ಮಿಸಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಪ್ರಿಂಟಿಂಗ್ ಟೆಕ್ ಪಾರ್ಕ್ ಆರಂಭಿಸಬೇಕು. ವಿವಿಧ ಗೌಪ್ಯ ಮಾಹಿತಿ ಮುದ್ರಿಸುವ ಮೂಲಕ ಮಣಿಪಾಲ ಪ್ರೆಸ್ ದೇಶದಲ್ಲಿಯೇ ಮಾದರಿಯಾಗಿದೆ. ಅದರ ಪ್ರವರ್ತಕ ಟಿ. ಸತೀಶ್ ಯು. ಪೈ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕಿದೆ.