ರಾಜ್ಯ ಸರ್ಕಾರದ ವಿರುದ್ಧ ಸಿಪಿಎಂ ಗುರುಪುರ ವಲಯ ಸಮಿತಿ ಭಾನುವಾರ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನಾ ಸಭೆ ನಡೆಸಿತು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಎಂ ಮುಖಂಡರಾದ ಬಾಬು ಸಾಲ್ಯಾನ್, ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮೊದಲಾದವರಿದ್ದರು.
ಗುರುಪುರ: ಕಾಂಗ್ರೆಸ್ ಸರ್ಕಾರಕ್ಕೂ ಬಡವರ ಆರೋಗ್ಯದ ಕಾಳಜಿ ಇಲ್ಲ ಎಂಬುದು ಸಾಬೀತಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳ ಸುಪರ್ದಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದ ಮೇಲೆ ಕನಿಷ್ಠ ಕಾಳಜಿ ಉಳಿಸಿಕೊಳ್ಳದ, ಜನವಿರೋಧಿ ಕಾರ್ಯಕ್ರಮಗಳ ಮೂಲಕ ಬಡವರ ಜೀವಿಸುವ ಹಕ್ಕು ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿರುವ ಸರ್ಕಾರದ ವಿರುದ್ಧ ಕಿಡಿಕಾರಿದ ಸಿಪಿಎಂ ಗುರುಪುರ ವಲಯ ಸಮಿತಿ ಭಾನುವಾರ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಪ್ರತಿಭಟನಾ ಸಭೆ ಹಾಗೂ ಗಂಜಿಮಠ ಜಂಕ್ಷನ್‌ನಲ್ಲಿ ಆಯೋಜಿಸಲಾದ ಬೃಹತ್ ಮಾನವ ಸರಪಳಿಯಲ್ಲಿ ಮಾತನಾಡಿದರು.
ಬಳಿಕ ಗಂಜಿಮಠ ಜಂಕ್ಷನ್‌ನ ಹೆದ್ದಾರಿ ಬದಿಯಲ್ಲಿ ಬೃಹತ್ ಮಾನವ ಸರಪಳಿ ನಡೆಯಿತು. ಇದರಲ್ಲಿ ನೂರಾರು ಮಂದಿ ಕೈಜೋಡಿಸಿದ್ದು, ಸರ್ಕಾರ ಹಾಗೂ ಆರೋಗ್ಯ ಸಚಿವರ ವಿರುದ್ಧ ಘೋಷಣೆ ಕೂಗಿದರು. , ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು ನಿರೂಪಿಸಿದರು.
ಮಾನವ ಸರಪಳಿಯಲ್ಲಿ ಸಿಪಿಎಂ ಮುಖಂಡರಾದ ಬಾಬು ಸಾಲ್ಯಾನ್, ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್, ವಸಂತಿ ಕುಪ್ಪೆಪದವು, ಗೋಪಾಲ ಮಳಲಿ, ನೋಣಯ್ಯ ಗೌಡ ಎಡಪದವು, ಹೊನ್ನಯ್ಯ ಅಮೀನ್ ಕೆತ್ತಿಕಲ್, ವಾರಿಜಾ ಕುಪ್ಪೆಪದವು, ಯಶೋದಾ ಮಳಲಿ, ಆನಂದ ಇರುವೈಲು, ರಾಜೇಶ್ ನಾಯ್ಕ ಇರುವೈಲು, ಲಿಂಗಪ್ಪ ಸಾಲ್ಯಾನ್, ಅಶೋಕ್ ಬಂಗೇರ ತಾರಿಗುಡ್ಡೆ ಮತ್ತಿತರರು ಇದ್ದರು.