ಸಿಎನ್ಜಿ ಹಾಗೂ ಕಿ.ಮೀ.ಗಟ್ಟಲೇ ಸಾಲು ನಿಂತ ವಾಹನಗಳು.
- ಕ್ಯೂನಲ್ಲಿ ನಿಂತರೂ ಬರಿದಾದ ಬಂಕ್ಗಳು!
- ಆಟೋ ರಿಾ, ಟ್ಯಾಕ್ಸಿ ಚಾಲಕರ ಅಳಲು
- ಹಲವೆಡೆ ನೋ ಸ್ಟಾಕ್' ಬೋರ್ಡ್
| ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕ ಎಂಬ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಬಿಟ್ಟು ಸಿಎನ್ಜಿ ಮೊರೆ ಹೋದ ವಾಹನ ಸವಾರರಿಗೆ ಈಗ "ಇಂಧನ' ಭಾಗ್ಯವೇ ಇಲ್ಲದಂತಾಗಿದೆ. ಪ್ರಸ್ತುತ ಮದುವೆ, ರಜೆಯ ಮಜಾ ಪಡೆಯಲು ಪ್ರವಾಸಕ್ಕೆ ತೆರಳುವ ಸೀಸನ್ನಲ್ಲಿ ಸಿಎನ್ಜಿ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದ ಆಟೋ ರಿಾ ಹಾಗೂ ಟ್ಯಾಕ್ಸಿ ಚಾಲಕರು ಬೀದಿಗೆ ಬೀಳುವಂತಾಗಿದೆ.
ಅಮೂಲ್ಯ ಸಮಯ ರಸ್ತೆಯಲ್ಲೇ ವ್ಯರ್ಥ:
ಅವಿಭಜಿತ ದ.ಕ.& ಉಡುಪಿ ಸೇರಿದಂತೆ ಗ್ರಾಮೀಣ ಭಾಗದಿಂದ ಹಿಡಿದು ನಗರದ ಬಹುತೇಕ ಸಿಎನ್ಜಿ ಸ್ಟೇಷನ್ಗಳ ಮುಂದೆ ಕಿಲೋಮೀಟರ್ಗಟ್ಟಲೆ ಪ್ರತಿ ನಿತ್ಯ ವಾಹನಗಳ ಸಾಲು ಕಂಡು ಬರುತ್ತಿದೆ. ಮುಂಜಾನೆ 4 ಗಂಟೆಗೆ ಸಾಲಿನಲ್ಲಿ ನಿಂತರೂ ಇಂಧನ ಸಿಗುವುದು ಮಧ್ಯಾಹ್ನ ಎನ್ನುವಂತಾಗಿದೆ. ಇದರಿಂದ ಚಾಲಕರ ದುಡಿಮೆಯ ಅಮೂಲ್ಯ ಸಮಯ ರಸ್ತೆಯಲ್ಲೇ ವ್ಯರ್ಥವಾಗುತ್ತಿದೆ.
ಆಟೋ ಚಾಲಕರ ಅಳಲು:
ಸಿಎನ್ಜಿ ಹಾಗೂ ಕಿ.ಮೀ.ಗಟ್ಟಲೇ ಸಾಲು ನಿಂತ ವಾಹನಗಳು. ದಿನಕ್ಕೆ 600&1000 ರೂ. ದುಡಿಯುತ್ತಿದ್ದ ಆಟೋ ಚಾಲಕರು ಈಗ ಗ್ಯಾಸ್ಗಾಗಿ 4&5 ಗಂಟೆ ಕಾಯಬೇಕಿದೆ. ಬಾಡಿಗೆಗೆ ಸಮಯವೇ ಇಲ್ಲದಂತಾಗಿದೆ. ಬಹುತೇಕ ಸಮಯ ಸಿಎನ್ಜಿ ಸ್ಟೆಷನ್ ಮುಂದೆ ಕಳೆಯುವಂತಾಗಿದೆ. ಇನ್ನು ಟೂರಿಸ್ಟ್ ವಾಹನಗಳಂತೂ ಸಿಎನ್ಜಿ ಸಿಗದೆ ಸೀಸನ್ ಸಮಯದಲ್ಲಿರುವ ಅಲ್ಪ ಬಾಡಿಗೆ ಕೈ ಬಿಟ್ಟು ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ ಒಂದು ಲೋಡ್ ಸಿಎನ್ಜಿ ಬಂದರೆ ಸಾಲು ನಿಂತ ಅರ್ಧದಷ್ಟು ವಾಹನಗಳಿಗೆ ತುಂಬುವಾಗಲೇ ಖಾಲಿಯಾಗುತ್ತದೆ. ಬಾಕಿ ಉಳಿದ ವಾಹನಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗುತ್ತಾರೆ. ಹೀಗಾಗಿ ಬ್ಯಾಂಕ್ನಿಂದ ಸಾಲ ಮಾಡಿ ಖರೀದಿಸಿದ ವಾಹನಗಳ ತಿಂಗಳ ಕಂತು ಕಟ್ಟುವುದು ಹೇಗೆ ಎಂದು ವಾಹನ ಮಾಲೀಕರು ಚಿಂತೆಗೀಡಾಗಿದ್ದಾರೆ.
ಬಂಕ್ಗಳ ಕೊರತೆ:
ಕಳೆದ ನಾಲ್ಕೆದು ತಿಂಗಳಿಂದ ನಿರಂತರ ಸಿಎನ್ಜಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿಎನ್ಜಿ ಕಾರು ಹಾಗೂ ಆಟೋ ರಿಕ್ಷಾಗಳ ಮಾರಾಟ ಶೇ.20ಕ್ಕಿಂತ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಬಂಕ್ಗಳ ಸಂಖ್ಯೆ ಹೆಚ್ಚಾಗಿಲ್ಲ. ಹೀಗಾಗಿ ಇರುವ ಬೆರಳೆಣಿಕೆಯ ಬಂಕ್ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಜಿಲ್ಲಾದ್ಯಂತ ಪ್ರತಿ 10 ಕಿ.ಮೀ.ಗೆ ಒಂದರಂತೆ ಸಿಎನ್ಜಿ ಪಂಪ್ಗಳು ತೆರೆದುಕೊಳ್ಳಬೇಕಾಗಿದೆ ಎನ್ನುವುದು ಬಹುತೇಕ ಚಾಲಕರ ಬೇಡಿಕೆ.
ಹಲವೆಡೆ ನೋ ಸ್ಟಾಕ್ ಬೋರ್ಡ್:
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವ ಪರಿಣಾಮ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಸಾಕಷ್ಟು ಮಂದಿ ಊರಿಗೆ ಬರುವ ಕಾರಣ ವಾಹನಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಈ ಸೀಸನ್ನಲ್ಲಿ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರವಾಸಿ ಕೇಂದ್ರವನ್ನು ಸುತ್ತಾಡಲು ಹೋಗುವ ಪ್ರವಾಸಿ ವಾಹನಗಳ ಓಡಾಟ ಹೆಚ್ಚಾಗಿದೆ. ಆದರೆ ಸಿಎನ್ಜಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸ್ಟಾಕ್ ಬೇಗನೆ ಖಾಲಿಯಾಗುತ್ತಿದೆ. ಬಂಕ್ಗಳ ಮುಂದೆ ನೋ ಸ್ಟಾಕ್' ಬೋರ್ಡ್ಗಳು ಹಾಗೂ ಹಲವು ಕಡೆಗಳಲ್ಲಿ ಸಿಎನ್ಜಿ ಲಭ್ಯವಿದ್ದರೂ ಪ್ರೆಶರ್ ಕಡಿಮೆ ಇರುವುದರಿಂದ ಸಿಲಿಂಡರ್ ಪೂರ್ಣ ಪ್ರಮಾಣದಲ್ಲಿ ತುಂಬುತ್ತಿಲ್ಲ. ಇನ್ನು ಕೆಲವು ಕಡೆ ಲಾರಿಗಳು ಬರುವುದು ತಡವಾಗುತ್ತಿರುವುದರಿಂದ ನೋ ಸ್ಟಾಕ್' ಬೋರ್ಡ್ಗಳು ರಾರಾಜಿಸುತ್ತಿವೆ. ಇದು ಚಾಲಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸೀಸನ್ ಸಮಯದಲ್ಲೇ ಸಿಎನ್ಜಿ ಕೈಕೊಟ್ಟರೆ ಬಾಡಿಗೆ ಮಾಡುವುದು ಹೇಗೆ ಎಂದು ವಾಹನ ಮಾಲಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಮಗೆ ಸಕಾಲಕ್ಕೆ ಇಂಧನ ಸಿಗದಿದ್ದರೆ ಸಾಲದ ಕಂತು ಕಟ್ಟುವುದು ಹೇಗೆ? ಸರ್ಕಾರ ಮತ್ತು ಕಂಪನಿಗಳು ಶ್ರೀ ಕ್ರಮ ಕೈಗೊಳ್ಳಬೇಕಾಗಿದೆ. ಪ್ರತಿ ನಿತ್ಯ ಬಾಡಿಗೆ ಸಿಗುವ ಸಮಯದಲ್ಲಿ ಬಂಕ್ ಮುಂದೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
| ಯೋಗೀಶ್, ಆಟೋ ಚಾಲಕ
ಪರಿಸರ ಉಳಿಸಲು ಸಿಎನ್ಜಿ ಬಳಸಿ ಎನ್ನುವ ಬದಲಿಗೆ ಮೊದಲು ಅದರ ಸುಗಮ ಪೂರೈಕೆಗೆ ಒತ್ತು ನೀಡಬೇಕಿದೆ. ಇಲ್ಲದಿದ್ದರೆ "ಹಸಿರು ಇಂಧನ'ದ ಕನಸು ಚಾಲಕರ ಪಾಲಿಗೆ ಮರೀಚಿಕೆಯಾಗುವುದರಲ್ಲಿ ಸಂಶಯವಿಲ್ಲ.
| ಜಗನ್ನಾಥ್ ಶೆಟ್ಟಿ, ಟ್ಯಾಕ್ಸಿ ಚಾಲಕ