- ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ
- ಬಸ್ ಸಂಚಾರ ಪ್ರಾರಂಭಕ್ಕೆ ಆಗ್ರಹ:
| ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಿಂದ ಬೈಂದೂರಿಗೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಗಂಗೊಳ್ಳಿ- ಬೈಂದೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸುವಂತೆ ಗಂಗೊಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಸ್ ವ್ಯವಸ್ಥೆ ಇಲ್ಲ:
ಬೈಂದೂರಿನಿಂದ ಗಂಗೊಳ್ಳಿಯ ವಿವಿಧ ಶಾಲಾ ಕಾಲೇಜುಗಳಿಗೆ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದು, ಮೀನುಗಾರರು, ಸಾರ್ವಜನಿಕರು, ಸರ್ಕಾರಿ ಮತ್ತು ಖಾಸಗಿ ನೌಕರರು, ಉದ್ಯಮಿಗಳು ಅವರವರ ಕಾರ್ಯನಿಮಿತ್ತ ಗಂಗೊಳ್ಳಿಯಿಂದ ಬೈಂದೂರಿಗೆ ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಗಂಗೊಳ್ಳಿಯಿಂದ ಬೈಂದೂರಿಗೆ ಮತ್ತು ಬೈಂದೂರಿನಿಂದ ಗಂಗೊಳ್ಳಿಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ಮೀನುಗಾರರು ಸಹಿತ ನೂರಾರು ಮಂದಿ ಸಕಾಲದಲ್ಲಿ ಗಂಗೊಳ್ಳಿಗೆ ಬರಲು ಮತ್ತು ಸಕಾಲದಲ್ಲಿ ಮನೆ ತಲುಪಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಖಾಸಗಿ ಬಸ್ಗಳು ಸಂಚಾರ ಸ್ಥಗಿತ:
ಕೆಲ ವರ್ಷಗಳ ಹಿಂದೆ ಗಂಗೊಳ್ಳಿ- ಬೈಂದೂರು ನಡುವೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿವೆ. ಬೈಂದೂರಿನಿಂದ ಗಂಗೊಳ್ಳಿಗೆ ಬರಲು ಎರಡೆರಡು ಬಸ್ಗಳನ್ನು ಬದಲಾಯಿಸಿ ಬರಬೇಕಿದೆ. ಬೈಂದೂರಿನಿಂದ ಬರುವಾಗ ತ್ರಾಸಿ ಜಂಕ್ಷನ್ನಲ್ಲಿ ಬಸ್ ಇಳಿಯಬೇಕಿದ್ದು, ರಾ.ಹೆ.66 ದಾಟಲು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಜೀವವನ್ನು ಕೈಯಲ್ಲಿ ಹಿಡಿಯಬೇಕಾದ ಪರಿಸ್ಥಿತಿ ಇದೆ. ರಸ್ತೆ ದಾಟುವ ಸಂದರ್ಭ ಅನೇಕ ಅಪಘಾತಗಳು ನಡೆದಿದ್ದು, ಹಲವರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಗಂಗೊಳ್ಳಿ- ಬೈಂದೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಈಗಾಗಲೇ ಅನೇಕ ಶಾಲಾ ಕಾಲೇಜುಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಸ್ ಸಂಚಾರ ಪ್ರಾರಂಭಕ್ಕೆ ಆಗ್ರಹ:
ಈ ಎಲ್ಲ ತೊಂದರೆ ಪರಿಹರಿಸಲು ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿನಿತ್ಯ ಗಂಗೊಳ್ಳಿ- ಬೈಂದೂರು ನಡುವೆ ಕೆಎಸ್ಆರ್ಟಿಸಿ ಗ್ರಾಮೀಣ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಮತ್ತು ಗಂಗೊಳ್ಳಿ- ಬೈಂದೂರು ನಡುವೆ ಸಂಚಾರ ಸ್ಥಗಿತಗೊಳಿಸಿರುವ ಖಾಸಗಿ ಬಸ್ಗಳ ಪರವಾನಗಿ ರದ್ದುಗೊಳಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಗಂಗೊಳ್ಳಿ& ಬೈಂದೂರು ನಡುವೆ ನೇರ ಬಸ್ ವ್ಯವಸ್ಥೆ ಇಲ್ಲ. ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ಗಳು ಕೂಡ ಸಂಚಾರ ಸ್ಥಗಿತಗೊಳಿಸಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿನಿತ್ಯ ಗಂಗೊಳ್ಳಿ& ಬೈಂದೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ ಪ್ರಾರಂಭಿಸಬೇಕು.
— | ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ
ಗಂಗೊಳ್ಳಿ- ಬೈಂದೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಬರುತ್ತಿದೆ. ಬಸ್, ಚಾಲಕ, ನಿರ್ವಾಹಕರ ಕೊರತೆ ಇರುವುದರಿಂದ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸುವುದು ಕಷ್ಟ. ಗಂಗೊಳ್ಳಿ- ಬೈಂದೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಲು ಪರಿಶೀಲನೆ ನಡೆಸಲಾಗುವುದು.
— ಉದಯ ಶೆಟ್ಟಿ, ಕುಂದಾಪುರ ಡಿಪೋ ಮ್ಯಾನೇಜರ್