ಕೋಟೆಕಾರ್ ಪಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಮುಖ್ಯಾಧಿಕಾರಿ ಮಾಲಿನಿ ಹಾಗೂ ಸದಸ್ಯ ಸುಜಿತ್ ಮಾಡೂರು ಮತ್ತು ಇಂಜಿನಿಯರ್ ದಿನೇಶ್ ಮೊದಲಾದವರಿದ್ದರು.  
ಉಡುಪಿ

ವಾರ್ಡ್ ಸಮಸ್ಯೆಗಳಿಗಿಲ್ಲ ಕ್ರಮ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ತಮ್ಮ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪದೇಪದೆ ಪ್ರಸ್ತಾಪಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸದಸ್ಯರು ಕೋಟೆಕಾರ್ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಸದಸ್ಯರ ಆರೋಪಗಳೇನು?

ಸದಸ್ಯ ಸುಜಿತ್ ಮಾಡೂರು ಮಾತನಾಡಿ, ಪ್ರತೀ ಸಭೆಯಲ್ಲೂ ನಾವು ವಾರ್ಡ್ ಸಮಸ್ಯೆಗಳ ಬಗ್ಗೆ ಗಮನಸೆಳೆಯುತ್ತಿದ್ದೇವೆ. ಆದರೆ ಅಧಿಕಾರಿಗಳು ಅದನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾರೆಯೇ ಹೊರತು, ಕಾರ್ಯರೂಪಕ್ಕೆ ತರುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗದಿದ್ದರೆ ನಮ್ಮ ಅಸ್ತಿತ್ವಕ್ಕೆ ಅರ್ಥವೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಡೂರು ಜಂಕ್ಷನ್‌ನ ಶೌಚಗೃಹದ ದುಸ್ಥಿತಿ ಬಗ್ಗೆ ಫೋಟೋ ಸಹಿತ ಮನವಿ ಸಲ್ಲಿಸಿ ಆರು ತಿಂಗಳಾಗಿದೆ. ಅಲ್ಲದೆ, ಮುಚ್ಚುವ ಭೀತಿಯಲ್ಲಿದ್ದ ಮಾಡೂರು ಸರ್ಕಾರಿ ಶಾಲೆಗೆ ಮರುಜೀವ ನೀಡಿದರೂ, ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದರು.
ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸ್ಥಳ ತೋರಿಸಿ ಒಳಚರಂಡಿ ಸಮಸ್ಯೆ ವಿವರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ದಿನೇಶ್, ಗುತ್ತಿಗೆದಾರರಿಗೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿದೆ ಎಂದರು. ಈ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಪ್ರತಿಕ್ರಿಯಿಸಿ, ಸಭೆಯಲ್ಲಿ ನಿರ್ಣಯ ಕೈಗೊಂಡು ಗುತ್ತಿಗೆದಾರರಿಗೆ ಅಂತಿಮ ನೋಟಿಸ್ ನೀಡಿ, ಟೆಂಡರ್ ರದ್ದುಗೊಳಿಸೋಣ ಎಂದು ಸಲಹೆ ನೀಡಿದರು.
ಪಪಂ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ ಹಾಗೂ ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

ಕ್ರೀಡಾ ಪ್ರತಿಭೆಗೆ ನಿರ್ಲಕ್ಷ್ಯ

ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕ ತನುಶ್ ಶೆಟ್ಟಿಗೆ ಪ್ರೋತ್ಸಾಹಧನ ನೀಡುವಂತೆ ನಾಲ್ಕು ತಿಂಗಳ ಹಿಂದೆಯೇ ದಾಖಲೆ ಸಲ್ಲಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಕ್ಷೇತರ ಸದಸ್ಯ ಹರೀಶ್ ರಾವ್ ಮಡ್ಯಾರ್ ಕಿಡಿಕಾರಿದರು.
15ನೇ ಹಣಕಾಸು ಯೋಜನೆಯಡಿ ಮಡ್ಯಾರ್-ದೇವರಮನೆ ಸಂಪರ್ಕ ರಸ್ತೆ ಮತ್ತು ತಡೆಗೋಡೆ ನಿರ್ಮಾಣಕ್ಕೆ 7 ಲಕ್ಷ ರೂ. ಅನುದಾನ ಮಂಜೂರಾಗಿ ಎರಡು ವರ್ಷಗಳಾಗಿವೆ. ಇದರಲ್ಲಿ 5 ಲಕ್ಷ ರೂ. ಬಳಸಿ ರಸ್ತೆ ನಿರ್ಮಾಣವಾಗಿದ್ದರೂ, ತಡೆಗೋಡೆ ಇನ್ನೂ ನಿರ್ಮಾಣವಾಗಿಲ್ಲ. ಮುಂಬರುವ ಮಳೆಗಾಲದಲ್ಲಿ ರಸ್ತೆ ಕೊಚ್ಚಿಹೋಗುವ ಭೀತಿಯಿದೆ. ಇದರಿಂದ ಮತ್ತಷ್ಟು ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಸದಸ್ಯ ಹರೀಶ್ ರಾವ್ ಮಡ್ಯಾರ್‌ದೂರಿದರು.
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಇಲಾಖೆಯಿಂದ ಕರೆ ಬಂದಿದ್ದಲ್ಲಿ, ತಕ್ಷಣವೇ ಮಂಗಳೂರಿನ ಉರ್ವ ಮಾರುಕಟ್ಟೆ ಬಳಿಯಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ತೆರಳಿ, ಯೋಜನೆಯೊಂದಿಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಮತ್ತು ರೇಷನ್ ಕಾರ್ಡ್ ನಕಲು ಪ್ರತಿಯನ್ನು ಸಲ್ಲಿಸಿ ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರೇಣುಕಾ ಹೇಳಿದರು.