ಹಳೆಯಂಗಡಿ ಬಸ್ ತಂಗುದಾಣದಲ್ಲಿ ಮಂಗಳೂರು ಮೀಡಿಯಾ ಮನಸುಗಳು ತಂಡದಿಂದ ಶ್ರಮದಾನ ನಡೆಯಿತು.
ಹಳೆಯಂಗಡಿ: ಹಳೆಯಂಗಡಿ ಬಸ್ ತಂಗುದಾಣ ಅವ್ಯವಸ್ಥೆಗಳ ಆಗರವಾಗಿದ್ದು ಹೆದ್ದಾರಿ ಇಲಾಖೆ ಹಾಗೂ ಸ್ಥಳೀಯ ಆಡಳಿತ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸದ ಕೊಂಪೆಯಾಗಿದ್ದು ಪತ್ರಕರ್ತರ ಶ್ರಮದಿಂದ ನಿಲ್ದಾಣ ಕಸಮುಕ್ತವಾಗಿದೆ.
ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಲ್ಪಟ್ಟಿರುವ ಈ ಬಸ್ ತಂಗುದಾಣವು ಇತಿಹಾಸ ಪ್ರಸಿದ್ಧ ಕಟೀಲು ದೇಗುಲ ಹಾಗೂ ಕಿನ್ನಿಗೋಳಿ ಕಡೆಗೆ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಮಹಿಳೆಯರು ಸಹಿತ ಸಾವಿರಾರು ಪ್ರಯಾಣಿಕರಿಗೆ ಅತ್ಯಂತ ಪ್ರಮುಖವಾಗಿದೆ.
ಬಸ್ ತಂಗುದಾಣ ಸುತ್ತ ಪೊದೆಗಳು ತುಂಬಿಕೊಂಡಿದ್ದು ನಿಲ್ದಾಣದಲ್ಲಿ ಕಸತ್ಯಾಜ್ಯ ವಸ್ತುಗಳು ತುಂಬಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಹೆದ್ದಾರಿ ಇಲಾಖೆ ಹಾಗೂ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೂಡಲೇ ಕಾರ್ಯಪ್ರವೃತ್ತರಾದ ಮಂಗಳೂರಿನ ಮೀಡಿಯಾ ಮನಸುಗಳು ಸಂಘಟನೆಯ ಸದಸ್ಯರು ಶನಿವಾರ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸುವ ಮೂಲಕ ಪ್ರಯಾಣಿಕರಿಗೆ ಆಸರೆಯಾಗಿದ್ದಾರೆ.
ಸಮಾಜಮುಖಿ ಕಾರ್ಯದಲ್ಲಿ ಮೀಡಿಯಾ ಮನಸುಗಳು ಸಂಘಟನೆಯ ಪ್ರಮುಖರಾದ ಶಶಿ ಬೆಳ್ಳಾಯರು, ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಶಿವು ಕುಲಾಲ್, ಸಂದೇಶ್ ಶೆಟ್ಟಿ, ಗಣೇಶ್ ಪಂಜ, ಗಿರೀಶ್ ಮಣೇಲ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮೆಸ್ಕಾಂ ಪವರ್‌ಮನ್ ಶ್ರೀಕಾಂತ್, ಉದ್ಯಮಿ ಜೈಕೃಷ್ಣ ಕೋಟ್ಯಾನ್ ಸಹಕಾರ ನೀಡಿದರು.