ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿದರು.
ಉಡುಪಿ: ಸಮ ಸಮಾಜ ನಿರ್ಮಾಣ ಗುರಿಯೊಂದಿಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲಾಗುತ್ತಿದ್ದು, ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೊಸ ಪಕ್ಷದ ಹೆಸರು ಘೋಷಿಸಲಾಗುವುದು. ಧ್ವಜ ಮತ್ತು ಪ್ರಣಾಳಿಕೆ ಬಿಡುಗಡೆಗೊಳಿಸಲಾಗುವುದು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಬನ್ನಂಜೆಯಲ್ಲಿ ನಡೆದ ರಾಜಕೀಯ ಮುನ್ನೋಟ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸುಮಾರು 3 ಸಾವಿರ ಪಕ್ಷಗಳು ನೋಂದಣಿಯಾಗಿವೆ. ಆದರೆ ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಯಾವುದೇ ರಾಜಕೀಯ ಪಕ್ಷಗಳು, ಸಂಟನೆಗಳು, ವ್ಯಕ್ತಿಗಳು ನಮ್ಮ ಶತ್ರುಗಳಲ್ಲ. ಅಸಮಾನತೆ ಮತ್ತು ಅನ್ಯಾಯದಿಂದ ಕೂಡಿದ ವ್ಯವಸ್ಥೆ ವಿರುದ್ಧ ಮಾತ್ರ ನಮ್ಮ ಪ್ರತಿರೋಧವಿದೆ. ಅಂಬೇಡ್ಕರ್, ಪೆರಿಯಾರ್, ಕಾನ್ಶಿರಾಮ್ ಅವರ ಸತ್ಯಪಂಥವನ್ನು ಅನುಸರಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಶೇಖರ ಹಾವಂಜೆ, ಜಯನ್ ಮಲ್ಪೆ, ಗಣೇಶ್ ನೇರ್ಗಿ, ಪ್ರಾಂಕಿ ಕೊಳಲಗಿರಿ ಉಪಸ್ಥಿತರಿದ್ದರು.