ಉಡುಪಿ: ಬ್ರಹ್ಮಾವರ ತಾಲೂಕಿನ ಜನತೆ ಬಹುದಿನಗಳ ಬೇಡಿಕೆಯಾಗಿದ್ದ ಪೂರ್ಣ ಪ್ರಮಾಣದ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಹೊಸದಾಗಿ ಸೃಷ್ಟಿಸಲಾದ ಬ್ರಹ್ಮಾವರ ನ್ಯಾಯಾಲಯಕ್ಕೆ ಒಟ್ಟು 7 ಪೂರಕ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಸಿವಿಲ್ ನ್ಯಾಯಾಧೀಶರು, ಓರ್ವ ಶೀಘ್ರಲಿಪಿಗಾರರು (ಗ್ರೇಡ್-2) ಓರ್ವ ಪ್ರಥಮ ದರ್ಜೆ ಸಹಾಯಕರು, ಹೊರಗುತ್ತಿಗೆ ಆಧಾರದಲ್ಲಿ ಓರ್ವ ಬೆರಳಚ್ಚುಗಾರರು, ಓರ್ವ ಅಟೆಂಡರ್, ಇಬ್ಬರು ಕಛೇರಿ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಉಡುಪಿಯಲ್ಲೇ ಉಳಿದ ಜೆಎಂಎಫ್ಸಿ ನ್ಯಾಯಾಲಯ
ಪ್ರಸ್ತುತ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ವಾರದಲ್ಲಿ 4 ದಿನಗಳ ಕಾಲ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಮೇ 12ರಂದು ಕರ್ನಾಟಕ ಹೈಕೋರ್ಟ್ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಕಾಯಂ ಆಗಿ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದಕ್ಕೆ ಉಡುಪಿ ಬಾರ್ ಅಸೋಸಿಯೇಶನ್ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಉಡುಪಿ ನ್ಯಾಯಾಲಯದ ಸ್ಥಳಾಂತರ ಪ್ರಕ್ರಿಯೆಗೆ ತಡೆ ಬಿದ್ದಿತ್ತು. ಸರ್ಕಾರದ ಹೊಸ ಆದೇಶದ ಹಿನ್ನೆಲೆಯಲ್ಲಿ ಸದ್ಯ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಸೇವೆ ನೀಡುತ್ತಿದ್ದ 1ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಕಾಯಂ ಉಡುಪಿಯಲ್ಲೇ ಮುಂದುವರಿಯಲಿದೆ. ಬ್ರಹ್ಮಾವರಕ್ಕೆ ಪ್ರತ್ಯೇಕ ಹೊಸ ನ್ಯಾಯಾಲಯ ಸ್ಥಾಪನೆಯಾಗಲಿದೆ.