ಬಿ.ಸಿ.ರೋಡ್‌ನಲ್ಲಿರುವ ವಸತಿ ಶಾಲೆಯ ಹಳೇ ಕಟ್ಟಡ 
ಉಡುಪಿ

ಹೊಸ ಕಟ್ಟಡ ನಿರ್ಮಾಣ ನನೆಗುದಿಗೆ

ಸಂದೀಪ್ ಸಾಲ್ಯಾನ್ ಬಂಟ್ವಾಳ
ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗಾಗಿ ಬಿ.ಸಿ.ರೋಡ್‌ನಲ್ಲಿದ್ದ ಅವಿಭಜಿತ ದ.ಕ.ಜಿಲ್ಲೆಯ ಏಕೈಕ ಮೆಟ್ರಿಕ್‌ಪೂರ್ವ ವಸತಿ ಸಹಿತ ಶಾಲೆಯನ್ನು ಹೊಸ ಕಟ್ಟಡ ನಿರ್ಮಾಣದ ಸಲುವಾಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿ ಮೂರು ವರ್ಷಗಳಾದರೂ ಇನ್ನೂ ಹೊಸ ಕಟ್ಟಡ ನಿರ್ಮಾಣಗೊಂಡಿಲ್ಲ. ಇನ್ನೊಂದೆರಡು ವರ್ಷದಲ್ಲಿ ನಾವೆಲ್ಲ ಹೊಸತಾದ ಸುಸಜ್ಜಿತ ಕಟ್ಟಡದಲ್ಲಿ ನೆಲೆಕಂಡುಕೊಳ್ಳುತ್ತೇವೆ ಎಂದು ವಸತಿ ಶಾಲೆಯ ವಿದ್ಯಾರ್ಥಿಗಳು ಕನಸು ಕಂಡಿದ್ದೇ ಬಂತು. ಈ ಕನಸು ಇನ್ನೆರಡು ಮೂರು ವರ್ಷ ಹೋದರೂ ನನಸಾಗುವುದು ದೂರದ ಮಾತು. ಯಾಕೆಂದರೆ ಹಳೆಯ ಕಟ್ಟಡದ ತೆರವು ಕಾರ್ಯವೇ ಇನ್ನೂ ನಡೆದಿಲ್ಲ. ಇದು ಬಿ.ಸಿ.ರೋಡ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಭಾರತರತ್ನ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಸದ್ಯದ ಸ್ಥಿತಿ!.
ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಆಶ್ರಯ: ಮೂರೂವರೆ ದಶಕಗಳ ಹಿಂದೆ ಬಿ.ಸಿ.ರೋಡ್‌ನ ಕೇಂದ್ರ ಸ್ಥಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಸತಿ ಶಾಲೆ ನಿರ್ಮಾಣಗೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿತ್ತು. ಈ ವಸತಿ ಶಾಲೆಗೆ ಚಿಕ್ಕಮಗಳೂರು, ಸಕಲೇಶಪುರ, ಹಾಸನ ಸಹಿತ ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಪ್ರತಿ ವರ್ಷ ವಸತಿ ಸಹಿತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದರು. ಕಟ್ಟಡದ ಕಳಪೆ ಗುಣಮಟ್ಟದಿಂದಾಗಿ ತರಗತಿ ಕೋಣೆ, ವಿದ್ಯಾರ್ಥಿಗಳು ಮಲಗುವ ಕೋಣೆ ಸಹಿತ ಇತರ ಭಾಗಗಳಲ್ಲಿ ಕಾಂಕ್ರೀಟ್ ಮೇಲ್ಛಾವಣಿ ಉದುರಲಾರಂಭಿತು. ಇದರಿಂದ ಆತಂಕಗೊಂಡ ನಿಲಯದ ಮೇಲ್ವಿಚಾರಕರು, ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಟ್ಟಡದ ಬೇಡಿಕೆಯನ್ನು ಇಲಾಖೆಯ ಮುಂದಿಟ್ಟಿದ್ದರು.
ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ: ವಸತಿ ಶಾಲೆ ಕಟ್ಟಡ ವಿದ್ಯಾರ್ಥಿಗಳ ವಾಸ್ತವ್ಯ ಹಾಗೂ ಕಲಿಕೆಗೆ ಅಪಾಯಕಾರಿಯಾದ ಕಾರಣ ಹಾಗೂ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ ವಸತಿ ಶಾಲೆಯನ್ನು ಬೆಂಜನಪದವಿನಲ್ಲಿರುವ ಖಾಸಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಾಸಿಕ 60 ಸಾವಿರ ರೂ. ಬಾಡಿಗೆ ಪಾವತಿಸಿ ಕಳೆದ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 76 ಮಂದಿ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಗರ ಕೇಂದ್ರದಲ್ಲೇ ವಸತಿ ಶಾಲೆ ಇದ್ದರೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಿಂದ ಬಿ.ಸಿ.ರೋಡ್‌ನಲ್ಲಿಯೇ ಸ್ವಂತ ಕಟ್ಟಡ ಶೀಘ್ರ ನಿರ್ಮಾಣವಾದರೆ ಒಳಿತು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ

ವಸತಿ ಶಾಲೆ ಇದ್ದ ಜಮೀನು ಈವರೆಗೆ ಬಂಟ್ವಾಳ ತಾಲೂಕು ಪಂಚಾಯಿತಿ ಹೆಸರಲ್ಲಿತ್ತು. ಹೊಸ ಕಟ್ಟಡ ನಿರ್ಮಿಸುವ ಸಂದರ್ಭ ಈ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಯ ಹೆಸರಿಗೆ ವರ್ಗಾಯಿಸಿ ಪಹಣಿ ಪತ್ರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 49 ಸೆಂಟ್ಸ್ ಜಾಗ ಇದ್ದು ತಾಲೂಕು ಪಂಚಾಯಿತಿಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಯಾದ ಕೂಡಲೆ ಹಳೇ ಕಟ್ಟಡ ತೆರವು ಹಾಗೂ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಸದ್ಯಕ್ಕೆ ಕಂದಾಯ ಇಲಾಖೆಯಲ್ಲಿ ಆರ್‌ಟಿಸಿ ಪ್ರಕ್ರಿಯೆ ನಡೆಯುತ್ತಿದೆ.

ಪುರಸಭೆ ಕೌನ್ಸಿಲ್ ನಕಾರ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುದಾನ ಲಭ್ಯ ಇಲ್ಲದೇ ಇರುವುದರಿಂದ ಹಳೇ ಕಟ್ಟಡವನ್ನು ತೆರವುಗೊಳಿಸಿ ಕೊಡಬೇಕು ಎಂದು ಈ ಹಿಂದೆ ಕರ್ತವ್ಯದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಬಂಟ್ವಾಳ ಪುರಸಭೆಗೆ ಮನವಿ ಸಲ್ಲಿಸಿದರು. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಕಟ್ಟಡ ತೆರವು ಮಾಡಲು ಲಕ್ಷಾಂತರ ರೂ. ಬೇಕಾಗುವುದರಿಂದ ಹಾಗೂ ಇದು ಪುರಸಭೆಯ ಬೊಕ್ಕಸಕ್ಕೆ ಅನವಶ್ಯಕ ಹೊರೆಯಾಗುವುದರಿಂದ ಅಂದಿನ ಪುರಸಭೆಯ ಕೌನ್ಸಿಲ್ ಈ ಪ್ರಸ್ತಾಪಕ್ಕೆ ಮನ್ನಣೆ ನೀಡದ ಕಾರಣ ಕಟ್ಟಡ ತೆರವು ಕಾರ್ಯ ನನೆಗುದಿಗೆ ಬಿದ್ದಿದೆ.

ತಾಲೂಕು ಪಂಚಾಯಿತಿ ಹೆಸರಿನಲ್ಲಿದ್ದ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಯ ಹೆಸರಿಗೆ ಪಹಣಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಕೆಲಸ ಪೂರ್ಣಗೊಳ್ಳಲಿದ್ದು ಬಳಿಕ ಹಳೇ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುವುದು.

— ವಿನಯಕುಮಾರಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ