ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಲ್ಲಿ ಕಾಣಿಸಿಕೊಂಡ ಬಿರುಕನ್ನು ಅಧಿಕಾರಿಗಳಿ ಪರಿಶೀಲಿಸಿದರು. ಗೋಪಾಲ್, ಸೂರಜ್, ಅಕ್ಷಯ್ ಸುವರ್ಣ, ಯೋಗೀಶ ಅಳಕೆ ಅಧಿಕಾರಿಗಳ ತಂಡದಲ್ಲಿದ್ದರು.
ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಪರಿಶೀಲನೆಗಾಗಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸೇತುವೆಗಳ ಇಕ್ಕೇಲಗಳ ಸ್ಲ್ಯಾಬ್‌ಗಳಲ್ಲಿ ಬಿರುಕು ಬಿಟ್ಟಿರುವ ಕುರಿತು ಅಧ್ಯಯನ ನಡೆಸಿ ಮಳೆ ಕಡಿಮೆಯಾದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಸೇತುವೆಗಳ ಫಿಲ್ಲರ್‌ಗಳಲ್ಲಿ ಕಾಣಿಸಿಕೊಂಡಿರುವ ಸವೆತವನ್ನು ಸರಿಪಡಿಸಲು ಯತ್ನಿಸುವುದರ ಜತೆಗೆ ಈ ಸೇತುವೆ ಮೇಲೆ ಸರಕು ಹೊತ್ತ ಭಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸೂಕ್ತವಾಗಿ ನಿರ್ವಹಿಸಿದರೆ ಸೇತುವೆ ಇನ್ನೂ 15 ವರ್ಷ ಬಾಳಿಕೆ ಬರುವ ಸಾಧ್ಯತೆ ಇದೆ. ಭಾರಿ ಗಾತ್ರದ ವಾಹನಗಳ ಸಂಚಾರದ ಮೇಲೆ ನಿಗಾ ಇರಿಸಬೇಕು. ಕುಪ್ಪೆಟ್ಟಿ-ಉಪ್ಪಿನಂಗಡಿ ನಡುವಣ ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿರುವುದರಿಂದ ಮರು ಡಾಮರೀಕರಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ಕಳುಹಿಸಲಾಗಿದೆ ಎಂದರು.
ಸಹಾಯಕ ಇಂಜಿನಿಯರ್ ಗೋಪಾಲ್, ಕಿರಿಯ ಇಂಜಿನಿಯರ್ ಸೂರಜ್, ಗುತ್ತಿಗೆದಾರ ಅಕ್ಷಯ್ ಸುವರ್ಣ, ಯೋಗೀಶ ಅಳಕೆ, ಇಳಂತಿಲ ಗ್ರಾ.ಪಂ. ವಾಜಿ ಅಧ್ಯಕ್ಷ ಇಸುಬು ಪೆದಮಲೆ, ವಾಜಿ ಸದಸ್ಯ ಯು.ಟಿ.ಫಯಾಜ್, ಅಹಮ್ಮದ್, ತಣ್ಣೀರುಪಂತ ಗ್ರಾ.ಪಂ. ಸದಸ್ಯ ಡಿ.ಕೆ.ಅಯೂಬ್, ಸ್ಥಳೀಯರಾದ ರಶೀದ್ ಯು.ಟಿ. ಅಮನ್, ನಬೀಲ್ ಉಪಸ್ಥಿತರಿದ್ದರು.