ಉಡುಪಿಯ ಲೋಂಬಾರ್ಡ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕವನ್ನು ಬಿಷಪ್ ಹೇಮಚಂದ್ರ ಕುಮಾರ್ ಉದ್ಘಾಟಿಸಿ ಆಶೀರ್ವದಿಸಿದರು. ಡಾ.ಸುಶೀಲ್ ಜತ್ತನ್ನ, ಡಾ. ಅಶೋಕ ಕುಮಾರ್, ಡಾ. ಗುರುಪ್ರಸಾದ ಶೆಟ್ಟಿ, ಡಾ. ಜನಾರ್ದನ್ ಪ್ರಭು ಇತರರಿದ್ದರು.
* ರೈಟ್ ರೆ. ಬಿಷಪ್ ಹೇಮಚಂದ್ರ ಕುಮಾರ್ ಆಶಯ
* ಲೋಂಬಾರ್ಡ್ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕ ಉದ್ಘಾಟನೆ
ಉಡುಪಿ: ಆಸ್ಪತ್ರೆಗೆ ಹೆರಿಗೆಗೆಂದು ಬಂದ ಮಹಿಳೆಯರಿಗೆ ಜನಿಸುವ ಕೆಲ ನವಜಾತ ಶಿಶುವಿನಲ್ಲಿ ದೈಹಿಕವಾಗಿ ಅಥವಾ ಆರೋಗ್ಯದಲ್ಲಿ ಸಮಸ್ಯೆಯಿದ್ದರೆ ಜೀವಕ್ಕೆ ಅಪಾಯವಾಗಬಹುದು. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಶಿಶುಗಳ ತೀವ್ರನಿಗಾ ಘಟಕವು ಆ ಮಗುವಿಗೆ ಜೀವದಾನ ನೀಡುವ ಕೇಂದ್ರವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿಂದು ಸೌಲಭ್ಯ&ಸೇವೆಗಳಲ್ಲೂ ಪೈಪೋಟಿಯಿದ್ದು, ಉಡುಪಿಯ ಲೋಂಬಾರ್ಡ್ ಆಸ್ಪತ್ರೆಯು ಉತ್ತಮ ವ್ಯವಸ್ಥೆಯೊಂದಿಗೆ ರೋಗಿಗಳಿಗೆ ಆಸರೆಯಾಗಿದೆ ಎಂದು ಸಿಎಸ್ಐ-ಕೆಎಸ್ಡಿ ಬಿಷಪ್ ರೈಟ್ ರೆ. ಹೇಮಚಂದ್ರ ಕುಮಾರ್ ತಿಳಿಸಿದರು.
ಉಡುಪಿಯ ಸಿಎಸ್ಐ ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಅಲ್ಟ್ರಾ ಸೌಂಡ್ ಹಾಗೂ ಇಕೋ ಕಲರ್ ಡಾಪ್ಲರ್ ಘಟಕವನ್ನು ಶನಿವಾರ (ಫೆ.14) ಉದ್ಘಾಟಿಸಿ ಮಾತನಾಡಿದರು.
ವಿಶೇಷ ಅನುಕೂಲ
ಐಎಂಎ ಕರಾವಳಿ-ಉಡುಪಿ ಅಧ್ಯಕ್ಷ ಡಾ. ಅಶೋಕ ಕುಮಾರ್, ಡಾ. ಗುರುಪ್ರಸಾದ ಶೆಟ್ಟಿ, ಡಾ. ಜನಾರ್ದನ್ ಪ್ರಭು ಮಾತನಾಡಿ, ಅವಧಿಗೂ ಮೊದಲೇ ಜನಿಸುವ ಶಿಶುಗಳಿಗೆ ಈ ಘಟಕವು ವಿಶೇಷ ಅನುಕೂಲ ಕಲ್ಪಿಸಲಿದೆ. ವಯಸ್ಸಾದವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೆ 5-10 ವರ್ಷ ಬದುಕಬಹುದು. ಆದರೆ, ಸಮಸ್ಯಾತ್ಮಕ ನವಜಾತ ಶಿಶುಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ 75ರಿಂದ 100 ವರ್ಷ ಬದುಕಬಹುದು. ಮೆದುಳಿನ ಬೆಳವಣಿಗೆ ಮಾಡಿಸುವ ಮೂಲಕ ಬುದ್ಧೀಹಿನರಾಗುವುದನ್ನು ತಪ್ಪಸಬಹುದು. 'ಡಾಕ್ಟರ್ ಹೇಗಾದರೂ ಮಾಡಿ ನಮ್ಮ ಮಗುವನ್ನು ಬದುಕಿಸಿಕೊಡಿ' ಎಂದು ಪಾಲಕರು ಅಳುವಾಗ ನಮಗೇನು ಮಾಡಬೇಕೋ ತೋಚುತ್ತಿರಲಿಲ್ಲ. ಇದೀಗ ಆ ಚಿಂತೆ ನಮಗಿಲ್ಲ. ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ ವ್ಯವಸ್ಥೆ ಒದಗಿಸಿದ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಡಾ. ಮನೋಹರ್ ಬೋಳೂರು ಉಪಸ್ಥಿತರಿದ್ದರು. ಉಡುಪಿ ವಿಭಾಗದ ಅಧ್ಯಕ್ಷ ರೆ. ಕಿಶೋರ್ ಕುಮಾರ್ ಹಾಗೂ ಆಸ್ಪತ್ರೆಯ ಕೋಶಾಧಿಕಾರಿ ರೆ. ಐವನ್ ಡಿಸೋನ್ಸ್ ಪ್ರಾರ್ಥಿಸಿದರು. ಆಸ್ಪತ್ರೆಯ ಎಚ್ಆರ್ ಮೆನೇಜರ್ ಲಿಯೋನಾ ಸ್ಟ್ರೆಲಿಟಾ ಸ್ವಾಗತಿಸಿದರು. ಆಸ್ಪತ್ರೆಯ ನರ್ಸಿಂಗ್ ವಿಭಾಗದ ಉಪನ್ಯಾಸಕಿ ನೋವಿಟಾ ನರೋನ್ಹಾ ವಂದಿಸಿದರು. ಅಸ್ಪತ್ರೆಯ ಸೀನಿಯರ್ ಅಕೌಂಟೆಂಟ್ ಸ್ಯಾಂಡ್ರಾ ಜಾಕ್ಲಿನ್ ಕಾರ್ಯಕ್ರಮ ನಿರೂಪಿಸಿದರು.
ಶಿಶುವಿನ ಆರೈಕೆ, ರಕ್ಷಣೆಗೆ ಸಹಕಾರಿ
ಲೋಂಬಾರ್ಡ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, 1923ರಲ್ಲಿ ಕೇವಲ 6 ಹಾಸಿನ ಹೆರಿಗೆ ಆಸ್ಪತ್ರೆಯಾಗಿ ಅರಂಭಗೊಂಡಿದ್ದ ಈ ಆಸ್ಪತ್ರೆಯಲ್ಲೀಗ 100ಕ್ಕೂ ಅಧಿಕ ಹಾಸಿಗೆ ವ್ಯವಸ್ಥೆ ಇದೆ. ಆದರೆ, 100 ವರ್ಷ ಕಳೆದರೂ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಇರಲಿಲ್ಲ. ದೇವರ ಕೃಪೆಯಿಂದ ಆ ಕೊರತೆಯೀಗ ನೀಗಿದೆ. ಈ ಘಟಕವು ಇಲ್ಲಿ ಜನಿಸುವ ಪ್ರತಿ ಶಿಶುವಿನ ಆರೈಕೆ ಹಾಗೂ ಜೀವರಕ್ಷಣೆಗೆ ಸಹಕಾರಿಯಾಗಲಿದೆ. ನಮ್ಮ ಆಸ್ಪತ್ರೆಯು ಶ್ರೇಷ್ಠ ಮಟ್ಟದ ಆರೈಕೆ, ಕರುಣೆ ಮತ್ತು ಕನಿಕರ ಹಾಗೂ ರೋಗಿಗಳಿಗೆ ಭವಿಷ್ಯದ ಆರೋಗ್ಯ ಸೇವೆ ಕುರಿತು ಮೂರು ಬದ್ಧತೆಯನ್ನು ಹೊಂದಿದೆ. ನಗರಭಾಗದಲ್ಲಷ್ಟೇ ಅಲ್ಲದೆ ಗ್ರಾಮೀಣ ಭಾಗಕ್ಕೂ ಉತ್ತಮ ಆರೋಗ್ಯ ಸೇವೆ ನೀಡಲು ಕಟಪಾಡಿಯಲ್ಲಿ ಕ್ಲಿನಿಕ್ ತೆರೆಯಲಾಗುವುದು. ಅಭಿವೃದ್ಧಿಗೆ ಎಂದಿಗೂ ಅಂತ್ಯ ಎನ್ನುವುದಿಲ್ಲ. ಹೀಗಾಗಿ ಮಾರ್ಚ್ ಮೊದಲನೇ ವಾರದಲ್ಲಿ ಒಬೆಸಿಟಿ ಕ್ಲಿನಿಕ್ ತೆರೆಯಲಿದ್ದೇವೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೂ ಮನಸ್ಸಿಗೆ ಸಮಾಧಾನ ಆಗುವಂತೆ, ಅಂಟಿರುವ ಕಾಯಿಲೆ ವಾಸಿಯಾಗಲು ಪೂರಕ ವ್ಯವಸ್ಥೆ-ಸಾಧನ ಬೇಕಾಗುತ್ತದೆ. ಲೋಂಬಾರ್ಡ್ ಆಸ್ಪತ್ರೆಯಲ್ಲಿರುವ ಎಲ್ಲ ವೈದ್ಯರು ಉತ್ತಮ ಸೇವೆ, ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ರಕ್ಷಣೆ ಮಾಡಬೇಕು. ಅದಕ್ಕೆ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.