ಕುಂಬಳೆಯಲ್ಲಿರುವ ರೌಫ್ ಮಾಲೀಕತ್ವದ ಹಣ್ಣಿನ ಅಂಗಡಿ.
ವಿಜಯವಾಣಿ ಸುದ್ದಿಜಾಲ ಕುಂಬಳೆ
ಒಂದೆಡೆ ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತೊಂದೆಡೆ ರಮಜಾನ್ ಹಬ್ಬದ ಕಾರಣದಿಂದ ಮಾರುಕಟ್ಟೆಗಳಲ್ಲಿ ಹಣ್ಣುಗಳ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟುತ್ತಿದ್ದರೆ, ಬಾಳೆಹಣ್ಣಿನ ಬೆಲೆ ಭಾರಿ ಕುಸಿತ ಕಂಡಿರುವುದು ಕೃಷಿಕರು ಹಾಗೂ ಮಾರಾಟಗಾರರನ್ನು ಕಂಗಾಲಾಗಿಸಿದೆ.
ವಿದೇಶಿ ತಳಿಗಳ ಹಣ್ಣುಗಳ ಬೆಳೆ ವಿಪರೀತ ಏರಿಕೆಯಾಗಿದೆ. ಆದರೆ ಸ್ಥಳೀಯವಾಗಿ ಬೆಳೆಯುವ ನೇಂದ್ರ ಬಾಳೆಹಣ್ಣು ತಲಾ ನಾಲ್ಕು ಕೆ.ಜಿ.ಗೆ ಕೇವಲ 100 ರೂ.ನಂತೆ ಮಾರಾಟವಾಗುತ್ತಿದೆ. ಬಾಳೆಹಣ್ಣು ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದೆ. ನೇಂದ್ರ ಬಾಳೆಹಣ್ಣಿನ ಅಗ್ಗದ ಬೆಲೆ ಗ್ರಾಹಕರಿಗೆ ಖುಷಿ ನೀಡಿದರೂ ಬೆಳೆಗಾರರಿಗೆ ತೀವ್ರ ನಿರಾಸೆ ಉಂಟುಮಾಡಿದೆ.
ದುಬಾರಿ ಹಣ್ಣುಗಳು
ಪ್ಲಮ್, ಲಿಚಿ, ಡ್ರ್ಯಾಗನ್ ಹಣ್ಣು, ಸ್ಟ್ರಾಬೆರಿ, ಕಿವಿ, ಆವಕಾಡೊ, ಗ್ಲೋಬ್ ದ್ರಾಕ್ಷಿ, ಶವಾಮ್ ಹಣ್ಣುಗಳ ದರ ತಲಾ ಕೆಜಿಗೆ 300 ರಿಂದ 400 ರೂ.ವರೆಗೆ ಇದೆ. ರಮಜಾನ್ ಉಪವಾಸ ತಿಂಗಳಾಗಿರುವ ಕಾರಣ ಈ ಹಣ್ಣುಗಳಿಗೆ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆ ಇದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕಲ್ಲಂಗಡಿಗೂ ಬೇಡಿಕೆ ಹೆಚ್ಚಾಗಿದ್ದು, ದರದಲ್ಲೂ ಕೊಂಚ ಏರಿಕೆಯಾಗಿದೆ. ಹಸಿರು ದ್ರಾಕ್ಷಿ, ಕಿತ್ತಳೆ, ಅನಾನಸ್ ಮತ್ತು ಪಪ್ಪಾಯಿಗಳಿಗೆ ಬೇಡಿಕೆ ಕಡಿಮೆಯಿದ್ದರೂ ಅವುಗಳ ಬೆಲೆ ಯಥಾಸ್ಥಿತಿಯಲ್ಲೇ ಇದೆ. ಬಹುತೇಕ ಎಲ್ಲ ಹಣ್ಣುಗಳಿಗೂ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ವಿದೇಶಿ ಸೇಬಿಗೂ ಭಾರಿ ಬೇಡಿಕೆ
ರಮಜಾನ್ ವಾಸ ಆರಂಭದಲ್ಲೇ ವಾವಿನ ಹಣ್ಣಿಗೆ ಕೆ.ಜಿ.ಗೆ 180 ರಿಂದ 300 ರೂ.ವರೆಗೆ ಬೆಲೆ ಏರಿಕೆಯಾಗಿದ್ದು, ಜತೆಗೆ ಸೇಬಿನ ದರವೂ ಹೆಚ್ಚಾಗಿದೆ. ಟರ್ಕಿ, ಇರಾನ್, ಫ್ರಾನ್ಸ್ ಸಹಿತ ವಿವಿಧ ದೇಶಗಳಿಂದ ಆಮದಾಗುವ ಸೇಬಿನ ದರವೂ ತಲಾ ಕೆ.ಜಿ.ಗೆ 200ರಿಂದ 300 ರೂ. ಇದೆ. ಜತೆಗೆ ವಿದೇಶಿ ತಳಿಯ ಸೇಬಿಗೆ ಭಾರಿ ಬೇಡಿಕೆ ಇದೆ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.
ನೇಂದ್ರ ಬಾಳೆ ಹಣ್ಣಿನ ಬೆಲೆ ತೀವ್ರ ಕುಸಿತಗೊಂಡಿದ್ದು, ನಾಲ್ಕು ಕೆ.ಜಿ.ನೇಂದ್ರ ಬಾಳೆಹಣ್ಣನ್ನು 100 ರೂ.ನಂತೆ ಮಾರಾಟ ಮಾಡುತ್ತಿದ್ದೇನೆ. ಮಾರುಕಟ್ಟೆಗಳಲ್ಲಿ ನೇಂದ್ರ ಬಾಳೆಹಣ್ಣಿಗೆ ಬೇಡಿಕೆ ಇದ್ದರೂ ಪೂರೈಕೆಯೂ ಜಾಸ್ತಿ ಇರುವ ಕಾರಣ ಕೃಷಿಕರಿಗೆ ನಷ್ಟವಾಗುತ್ತಿದೆ. ಕೇರಳಾದ್ಯಂತ ನೇಂದ್ರ ವ್ಯಾಪಾರಿಗಳೇ ತುಂಬಿರುವುದು ಬಾಳೆಹಣ್ಣು ದರ ಕುಸಿತಕ್ಕೆ ಇನ್ನೊಂದು ಕಾರಣ. ನೇಂದ್ರ ಬಾಳೆಹಣ್ಣಿನ ಫಸಲು ಹೆಚ್ಚಾಗಿದ್ದು, ರ್ತು ಪ್ರಮಾಣ ಬಹಳ ಕಡಿಮೆಯಾಗಿರುವುದರಿಂದ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ.