AI ಚಿತ್ರ  
ಉಡುಪಿ

ಉಡುಪಿ ಜಿಲ್ಲೆಯಲ್ಲಿ ಋಣಾತ್ಮಕ ಜನಸಂಖ್ಯಾ ಬೆಳವಣಿಗೆ

ಉಡುಪಿ: ಸಾಕ್ಷರತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಋಣಾತ್ಮಕ ಜನಸಂಖ್ಯಾ ಬೆಳವಣಿಗೆ ದಾಖಲಾಗಿದ್ದು, ಜನನಕ್ಕಿಂತ ಮರಣ ಪ್ರಮಾಣವೇ ಜಾಸ್ತಿಯಾಗುತ್ತಿದೆ. ಪ್ರಾಥಮಿಕ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು, ಪ್ರಮುಖ ಸಾಮಾಜಿಕ ಸ್ಥಿತ್ಯಂತರ ಗೋಚರಿಸುತ್ತಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳ ಜನನ ಮತ್ತು ಮರಣಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಹುಟ್ಟುವ ಮಕ್ಕಳ ಸಂಖ್ಯೆಗಿಂತ ಸಾವನ್ನಪ್ಪುತ್ತಿರುವವರ ಸಂಖ್ಯೆಯೇ ಹೆಚ್ಚಿರುವುದು ಬೆಳಕಿಗೆ ಬಂದಿದೆ. ಇದು ಜಿಲ್ಲೆಯ ಜನಸಂಖ್ಯಾ ಬೆಳವಣಿಗೆಯ ದರ ಕುಸಿಯುತ್ತಿರುವುದಕ್ಕೆ ಸ್ಪಷ್ಟ ಮುನ್ಸೂಚನೆಯಾಗಿದೆ.

ಜಿಲ್ಲೆಯಲ್ಲಿ ಜನನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದರೆ ಮರಣ ಹೊಂದುತ್ತಿರುವವರ ಸಂಖ್ಯೆ ಸ್ಥಿರವಾಗಿ ಏರಿಕೆಯ ಹಾದಿಯಲ್ಲಿದೆ. 2021ರಲ್ಲಿ 12983 ಮಕ್ಕಳು ಹುಟ್ಟಿದ್ದರೆ 13934 ಮಂದಿ ಮೃತಪಟ್ಟಿದ್ದರು. 2022ರಲ್ಲಿ 13180 ಮಕ್ಕಳು ಜನಿಸಿದ್ದು, 12528 ಮಂದಿ ಮೃತರಾಗಿದ್ದರು. 2023ರಲ್ಲಿ 12126 ಮಕ್ಕಳ ಜನನವಾಗಿದ್ದು, 12051 ಮಂದಿ ಮೃತಪಟ್ಟಿದ್ದರು. 2024ರಲ್ಲಿ 11047 ಮಕ್ಕಳು ಹುಟ್ಟಿದ್ದು, 12269 ಮಂದಿ ಸಾವನ್ನಪ್ಪಿದ್ದರು. 2025ರಲ್ಲಿ 11142 ಮಕ್ಕಳು ಹುಟ್ಟಿದ್ದು, 12509 ಮಂದಿ ನಿಧನರಾಗಿದ್ದಾರೆ. ಕರೋನೋತ್ತರ ಕಾಲಟ್ಟದಲ್ಲಿ ಜಿಲ್ಲೆಯಲ್ಲಿ ಹೊಸದೊಂದು ಜನಸಂಖ್ಯಾ ಏರುಪೇರಿನ ಆತಂಕ ಎದುರಾಗಿದೆ.

ವಲಸೆ ಮತ್ತು ಒಂದೇ ಮಗು ನೀತಿ
ತಡವಾಗಿ ಮದುವೆಯಾಗುವುದು, ಒಂದೇ ಮಗು ನೀತಿ, ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಮಕ್ಕಳ ಜನನ ಪ್ರಮಾಣ ಇಳಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂ, ಕ್ರಿಶ್ಚಿಯನ್​ ಸಮುದಾಯದ ಯುವ ದಂಪತಿ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಒಂದೇ ಮಗು ನೀತಿಗೆ ಮೊರೆಹೋಗುತ್ತಿರುವುದರಿಂದ ಜನನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕಾಗಿ ಜಿಲ್ಲೆಯ ಯುವ ಪೀಳಿಗೆ ಬೆಂಗಳೂರು, ಮುಂಬೈ ಅಥವಾ ವಿದೇಶಗಳಿಗೆ ವಲಸೆ ಹೋಗುತ್ತಿರುವುದು ಕೂಡ ಸ್ಥಳಿಯವಾಗಿ ಜನನ ದರ ಕುಸಿಯಲು ಪ್ರಮುಖ ಕಾರಣವಾಗಿದೆ. ಪ್ರಗತಿಪರ ಸಮಾಜದಲ್ಲಿ ಜನನ ದರಕ್ಕಿಂತ ಮರಣ ದರ ಹೆಚ್ಚಾಗುತ್ತಾ ಹೋದರೆ ಮುಂದಿನ ದಿನಗಳಲ್ಲಿ ಯುವ ಶಕ್ತಿಯ ಕೊರತೆ ಎದುರಾಗಬಹುದು. ಇದು ಹೀಗೆಯೇ ಮುಂದುವರಿದರೆ ಜಿಲ್ಲೆ ವೃದ್ಧರ ಜಿಲ್ಲೆಯಾಗಿ ಬದಲಾಗುವ ಅಪಾಯವಿದೆ ಎಂದು ಜನಸಂಖ್ಯಾ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
1ನೇ ತರಗತಿ ದಾಖಲಾತಿ ಸಂಖ್ಯೆಯೂ ಕುಸಿತ
ಜನಸಂಖ್ಯಾ ಶಾಸ್ತ್ರದ ಬದಲಾವಣೆಗಳನ್ನು ಅನೇಕ ಆಯಾಮಗಳಲ್ಲಿ ವಿಶ್ಲೇಷಿಸುವ ಅಗತ್ಯವಿದೆ. ಕಳೆದ 5 ವರ್ಷಗಳ ಸರ್ಕಾರಿ ಅಂಕಿಅಂಶಗಳನ್ನು ಗಮನಿಸಿದರೆ ಪ್ರಥಮ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಶೇ.50ಕ್ಕಿಂತ ಹೆಚ್ಚು ಕಡಿಮೆಯಾಗಿದೆ. 2021&22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 16,279 ಮಕ್ಕಳು ಹೊಸದಾಗಿ ಮೊದಲನೇ ತರಗತಿಗೆ ದಾಖಲಾಗಿದ್ದರು. 2022&23ರಲ್ಲಿ 14166 ಮತ್ತು 2023&24ರಲ್ಲಿ 14073 ಮಕ್ಕಳು, 2.24&25ನೇ ಸಾಲಿನಲ್ಲಿ 13821 ಮಕ್ಕಳು, 2025&26ನೇ ಸಾಲಿನಲ್ಲಿ 11300 ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದರು. 2026&27ನೇ ಸಾಲಿನಲ್ಲಿ ಈ ಪ್ರಮಾಣ ತೀರಾ ಇಳಿಕೆಯಾಗಿದ್ದು, ಜೂನ್​ ತಿಂಗಳ ಅಂಕಿಅಂಶ ಪ್ರಕಾರ ಜಿಲ್ಲೆಯಾದ್ಯಂತ ಒಟ್ಟು 7256 ವಿದ್ಯಾರ್ಥಿಗಳು 1ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಖಾಸಗಿ ಶಾಲೆಗಳಿಗೆ 5,974 ಮಕ್ಕಳು, ಸರ್ಕಾರಿ ಶಾಲೆಗಳಿಗೆ 3,063 ಮಕ್ಕಳು, ಅನುದಾನಿತ ಶಾಲೆಗಳಿಗೆ ಕೇವಲ 565 ಮಕ್ಕಳು ಸೇರ್ಪಡೆಯಾಗಿದ್ದಾರೆ. ಇದು ಮಕ್ಕಳ ಜನನ ಪ್ರಮಾಣ ಇಳಿಕೆಯಾಗುತ್ತಿರುವ ಸ್ಪಷ್ಟ ಮುನ್ಸೂಚನೆಯಾಗಿದೆ.
"

ದೇಶದಲ್ಲಿ ಪ್ರತಿ ದಿನ ಸರಿಸುಮಾರು 63 ಸಾವಿರ ಮಕ್ಕಳು ಜನಿಸುತ್ತಿದ್ದರೆ 27 ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 11,142 ಮಕ್ಕಳು ಜನಿಸಿದ್ದರೆ, 12,509 ಜನ ಮೃತಪಟ್ಟಿದ್ದಾರೆ. ಅಂದರೆ ಜಿಲ್ಲೆಯಲ್ಲಿ ಜನನ ಹಾಗೂ ಮರಣದ ಪ್ರಮಾಣ ಹೆಚ್ಚು ಕಡಿಮೆ ಸರಿಸಮನಾಗಿದೆ. ಇದಕ್ಕೆ ತಡವಾಗಿ ಮದುವೆಯಾಗುವುದು, ಒಂದೇ ಮಗು ಸಾಕು ಎಂಬ ನೀತಿ ಮುಖ್ಯ ಕಾರಣವಾಗಿದೆ. ಜನ ಸಾಮಾನ್ಯರ ಜೀವಿತಾವಧಿ ಜಿಲ್ಲೆಯಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ.