ಉಡುಪಿ ಜಿಲ್ಲೆಯಲ್ಲಿನ ನೀಟ್ ಮರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸಿದ್ಧತೆ ಹಾಗೂ ವ್ಯವಸ್ಥೆ ಪರಿಶೀಲಿಸಿದರು. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.
* 2,970 ವಿದ್ಯಾರ್ಥಿಗಳು ನೋಂದಣಿ
* 2,090 ಮಂದಿ ಹಾಜರು
* 880 ಮಕ್ಕಳು ಗೈರು
ಉಡುಪಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಉಡುಪಿ ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಯುಜಿ-2026 ಪರೀಕ್ಷೆ ಭಾನುವಾರ (ಜೂ.21) ನಡೆಯಿತು. ಪರೀಕ್ಷೆಗೆ ಒಟ್ಟು 2,970 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 2,090 ಮಂದಿ ಪರೀಕ್ಷೆ ಬರೆದರು. ಒಟ್ಟು 880 ವಿದ್ಯಾರ್ಥಿಗಳು ಗೈರಾಗಿದ್ದರು.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15ರ ವರೆಗೆ ಪರೀಕ್ಷಾ ಸಮಯ ನಿಗದಿ ಮಾಡಿದ್ದರಿಂದ ಅಭ್ಯರ್ಥಿಗಳು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ರ ಒಳಗಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚನೆ ನೀಡಲಾಗಿತ್ತು.
ವಿದ್ಯಾರ್ಥಿಗಳ ತಪಾಸಣೆ
ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಗೇಟ್ನಲ್ಲಿಯೇ ತಪಾಸಣೆ ನಡೆಸಿ ಒಳಬಿಡಲಾಯಿತು. ಕಾಲೇಜಿನ ಒಳಗೆ ಎಲ್ಲರ ಬಯೋಮೆಟ್ರಿಕ್ ಹಾಗೂ ಹಾಲ್ ಟಿಕೆಟ್ ಪರಿಶೀಲಿಸಿದ ಬಳಿಕವೇ ಎಕ್ಸಾಂ ಹಾಲ್ಗೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
6 ಸೆಂಟರ್ಗಳ ಮಾಹಿತಿ
ಉಡುಪಿ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 432 ಮಕ್ಕಳು ಹಾಜರಾಗಿದ್ದು 168 ಮಂದಿ ಗೈರಾಗಿದ್ದರು. ವಿವೇಕ ಪಿಯು ಕಾಲೇಜು ಕೋಟದಲ್ಲಿ 600 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು 430 ಮಂದಿ ಹಾಜರಾಗಿದ್ದು, 170 ಮಕ್ಕಳು ಗೈರಾಗಿದ್ದರು. ಎಂಜಿಎಂ ಪಿಯು ಕಾಲೇಜು ಉಡುಪಿಯಲ್ಲಿ 594 ಮಕ್ಕಳು ನೋಂದಣಿ ಮಾಡಿದ್ದು, 417 ಮಂದಿ ಹಾಜರಾಗಿದ್ದು, 177 ವಿದ್ಯಾರ್ಥಿಗಳು ಗೈರಾಗಿದ್ದರು. ಸರ್ಕಾರಿ ಪಿಯು ಬೋರ್ಡ್ ಉಡುಪಿಯಲ್ಲಿ 480 ಮಕ್ಕಳು ನೋಂದಣಿ ಮಾಡಿದ್ದು, 329 ಹಾಜರಾತಿಯಿದ್ದು, 151 ಮಂದಿ ಗೈರಾಗಿದ್ದರು. ಸರ್ಕಾರಿ ಪಿಯು ಕಾಲೇಜು (ಬಾಲಕಿಯರ) ಉಡುಪಿಯಲ್ಲಿ 360 ಮಕ್ಕಳು ನೋಂದಣಿಯಾಗಿದ್ದು, 245 ಮಂದಿ ಹಾಜರಾಗಿ, 115 ವಿದ್ಯಾರ್ಥಿಗಳು ಗೈರಾಗಿದ್ದರು. ಸರ್ಕಾರಿ ಪ್ರಿ-ಯುನಿವರ್ಸಿಟಿ ಕಾಲೇಜು ಬ್ರಹ್ಮಾವರದಲ್ಲಿ 336 ಮಕ್ಕಳು ನೋಂದಣಿಯಾಗಿದ್ದು, 237 ಹಾಜರಾತಿ ಇದ್ದು, 99 ಮಂದಿ ಗೈರಾಗಿದ್ದರು.
"
ಯಾವ ಸೆಂಟರ್ನಲ್ಲೂ ನಕಲು, ವಿದ್ಯಾರ್ಥಿಗಳ ಡಿಬಾರ್ ಪ್ರಕರಣ ಘಟಿಸದೆ ಅತ್ಯಂತ ವ್ಯವಸ್ಥಿತವಾಗಿ ನೀಟ್ ಮರು ಪರೀಕ್ಷೆ ನಡೆದಿದೆ. ಈ ಬಾರಿ 15 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದ್ದು, ಅಂಗವಿಕಲರಿಗೆ ಪರೀಕ್ಷೆ ಬರೆಯಲು ಒಂದು ಗಂಟೆ ಹೆಚ್ಚು ಕಾಲಾವಕಾಶ ನೀಡಲಾಗಿತ್ತು.
— ಎನ್. ಕರೀಂ ಖಾನ್. ಉಡುಪಿ ಜಿಲ್ಲಾ ನೀಟ್ ಪರೀಕ್ಷೆಯ ಸಂಯೋಜಕ.