ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪಶ್ಚಿಮ ಘಟ್ಟದ ಸಾಲುಗಳಾದ ಕಾರ್ಕಳ-ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಶೋಲಾ ಹುಲ್ಲುಗಾವಲು ಪ್ರದೇಶದಲ್ಲಿ ಪ್ರಕೃತಿಯ ವಿಸ್ಮಯವೊಂದು ಮರುಕಳಿಸಿದೆ. ಪ್ರಕೃತಿಪ್ರೇಮಿಗಳ ಕಣ್ಮನ ಸೆಳೆಯುವ 12 ವರ್ಷಗಳಿಗೊಮ್ಮೆ ಸಮೂಹವಾಗಿ ಅರಳುವ ಅಪರೂಪದ ‘ನೀಲಕುರಂಜಿ’ ಹೂವುಗಳು ಇಲ್ಲಿನ ಗಂಗಡಿಕಲ್ಲು, ಚಿಟ್ಕಲ್‌ಗುಡ್ಡ ಹಾಗೂ ಕುದುರೆಮುಖ ಪೀಕ್ ಭಾಗದಲ್ಲಿ ಅರಳಿ ನಿಂತು ಪ್ರಕೃತಿಪ್ರಿಯರ ಕಣ್ಮನ ತಣಿಸುತ್ತಿದೆ.
ಈ ಹೂವು ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಸಮೂಹವಾಗಿ ಅರಳುವ ವಿಶಿಷ್ಟ ಪ್ರಭೇದ. 2018ರಲ್ಲಿ ಸಮೂಹವಾಗಿ ಅರಳಿದ್ದು, ಬಳಿಕ ಮುಂದೆ 2030ರಲ್ಲಿ ಅರಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಲ್ಕು ವರ್ಷಗಳ ಮೊದಲೇ ಗಂಗಡಿಕಲ್ಲು ಚಿಟ್ಕಲ್‌ಗುಡ್ಡ ಕುದುರೆಮುಖ ಪೀಕ್ ಭಾಗದಲ್ಲಿ ಹೂವುಗಳು ಕಾಣಿಸಿಕೊಂಡಿರುವುದು ಸೋಜಿಗವುಂಟು ಮಾಡಿದೆ. ಹೀಗೆ ಅವಧಿಗೆ ಮುಂಚಿತ ಅರಳಿರುವುದಕ್ಕೆ ನಿಖರ ವೈಜ್ಞಾನಿಕ ಕಾರಣ ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ಇದಕ್ಕೆ ಹವಾಮಾನ ಬದಲಾವಣೆ ಕಾರಣ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು.
ಕುದುರೆಮುಖದ ಶೋಲಾ ಹುಲ್ಲುಗಾವಲು ಪರಿಸರ ವ್ಯವಸ್ಥೆಯಲ್ಲಿ ನೀಲಕುರಂಜಿಗೆ ಮಹತ್ವದ ಸ್ಥಾನವಿದೆ. ಹೂವುಗಳು ಅರಳುವ ಸಂದರ್ಭ ಜೇನುನೊಣ, ಚಿಟ್ಟೆ ಸಹಿತ ವಿವಿಧ ಪರಾಗಸ್ಪರ್ಶ ಜೀವಿಗಳಿಗೆ ಇದು ಆಹಾರ ಮತ್ತು ಪರಾಗದ ಮೂಲ. ಭಾರತದಲ್ಲಿ ಸ್ಟೋಬಿಲಾಂಥಿಸ್ ಕುಲದ 160ಕ್ಕೂ ಹೆಚ್ಚು ಪ್ರಭೇದಗಳಿದ್ದು, ಅವುಗಳಲ್ಲಿ 72 ಪ್ರಭೇದಗಳು ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾಗಿವೆ. ಇದು ಈ ಸಸ್ಯ ಸಮೂಹದ ವೈಶಿಷ್ಟ್ಯ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು.
ನೀಲಕುರಂಜಿ ಅರಳಿದಾಗ ಕುದುರೆಮುಖಕ್ಕೆ ಪ್ರಕೃತಿ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೂವುಗಳನ್ನು ಕೀಳುವುದು, ಗಿಡಗಳ ಮೇಲೆ ಕಾಲಿಡುವುದು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದೂ ಹೆಚ್ಚು. ಇದಕ್ಕೆ ಕಡಿವಾಣ ಹಾಕಬೇಕು. ಹೂವುಗಳ ಸೌಂದರ್ಯ ಆಸ್ವಾದನೆಯ ಜತೆಗೆ ಪರಿಸರ ಸಂರಕ್ಷಣೆಯೂ ನಮ್ಮ ಹೊಣೆ ಎನ್ನುತ್ತಾರೆ ಚಾರಣಿಗರು.
12 ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಈ ಅಪರೂಪದ ಹೂವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಬಂದಿದ್ದರು. ಹೂಗಳನ್ನು ಮುಟ್ಟುವುದು, ಕೀಳುವುದು ಅಥವಾ ಸಸ್ಯಕ್ಕೆ ಹಾನಿ ಮಾಡುವುದನ್ನು ನಿಷೇಧಿಸಿದ್ದು, ಅದರ ಸಂರಕ್ಷಣೆಗೆ ಇಲಾಖೆ ನಿರಂತರ ನಿಗಾ ವಹಿಸುತ್ತಿದೆ. ಒಂದು ತಿಂಗಳಿನಿಂದ ಅಲ್ಲಲ್ಲಿ ನೀಲಕುರಂಜಿ ಅರಳಿವೆ.ರುಥೇನ್ ಡಿಎಫ್‌ಒ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ
ಕರ್ನಾಟಕ, ಕೇರಳ, ತಮಿಳುನಾಡಿನ ಕೆಲವೇ ಭಾಗದ ಶೋಲ ಅರಣ್ಯದಲ್ಲಿ ಮಾತ್ರ ಕಂಡು ಬರುವ ವಿಶೇಷ ಹೂವು ನೀಲಕುರಂಜಿಯಾಗಿದೆ. ನಾಲ್ಕು ವರ್ಷಗಳ ಮೊದಲೇ ಕುದುರೆಮುಖದಲ್ಲಿ 2026ರಲ್ಲೇ ಹೂಬಿಟ್ಟಿರುವುದು ಅಚ್ಚರಿ ಮೂಡಿಸಿದೆ.ಶ್ರುತಿ ನಾಯಕ್ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರು, ಎಂಜಿಎಂ ಕಾಲೇಜು