ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 31ನೇ ಪದವಿ ಪ್ರದಾನ ಸಮಾರಂಭ ನಡೆಯಿತು. ಡಾ.ಭಗವಾನ್ ಬಿ.ಸಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ಪಾಶ್ಚಾತ್ಯ ದೇಶಗಳ ಪ್ರಾಬಲ್ಯಕ್ಕೆ ಸಿಲುಕದೆ ಭಾರತದ ಅದ್ಭುತ ವೈಜ್ಞಾನಿಕ ವೈದ್ಯಕೀಯ ಪರಂಪರೆ ಬಗ್ಗೆ ಗಮನಹರಿಸುವ ಅಗತ್ಯವಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರಚಲಿತ ವಿದ್ಯಮಾನ ಗಮನಿಸಿದರೆ ಪ್ರಕೃತಿಯೊಂದಿಗೆ ಹೊಂದಿಕೊಂಡಿರುವ ಚಿಕಿತ್ಸೆ ಮುಂದಿನ ಭವಿಷ್ಯ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಭಗವಾನ್ ಬಿ.ಸಿ. ಹೇಳಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 31ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ, ಪ್ರಸ್ತುತ ಜಗತ್ತಿನಲ್ಲಿ ಹೆಚ್ಚುತ್ತಿರುವ ಜೀವನ ಶೈಲಿ ಅಸ್ವಸ್ಥತೆ ಗುಣಪಡಿಸಲು ವೈದ್ಯರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ತೇರ್ಗಡೆ ಹೊಂದುತ್ತಿರುವ ವಿದ್ಯಾರ್ಥಿಗಳು ಸುಸ್ಥಿರ ವೈದ್ಯಕೀಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಬೇಕು ಎಂದರು.
ಡಾ.ಭಗವಾನ್ ಬಿ.ಸಿ. ಪದವಿ ಪ್ರದಾನ ಮಾಡಿದರು. ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಸುಜಾತ ಕೆ.ಜೆ. ಪ್ರಮಾಣವಚನ ಬೋಧಿಸಿದರು. ನ್ಯೂಟ್ರಿಷನ್ ಹಾಗೂ ಡಯೆಟಿಕ್ಸ್ ವಿಭಾಗದ ಡೀನ್ ಡಾ.ಗೀತಾ ಬಾಲಕೃಷ್ಣ ಶೆಟ್ಟಿ ಕಾಲೇಜಿನ ರಿಸರ್ಚ್ ಸೆಂಟರ್‌ನಲ್ಲಿ ಪಿಎಚ್.ಡಿ ಪೂರ್ಣಗೊಳಿಸಿದವರಲ್ಲಿ ಮೊದಲಿಗರಾಗಿದ್ದು ಅವರಿಗೆ ಪದವಿ ನೀಡಿ ಗೌರವಿಸಲಾಯಿತು. ಡಾ.ಶ್ರೀನಿವಾಸ ಶೆಣೈ ಕೆ. ಅವರಿಗೆ 2023-24ನೇ ಸಾಲಿನ ಅತ್ಯುತ್ತಮ ತೇರ್ಗಡೆ ಹೊಂದುತ್ತಿರುವ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಮುಖ್ಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಕೆ. ಉಪಸ್ಥಿತರಿದ್ದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಕೆ. ವಂದಿಸಿದರು. ಡಾ.ರಿಶಿಕಾ ರೈ, ಕಾವ್ಯಾ ಎಂ. ಕಾರ್ಯಕ್ರಮ ನಿರೂಪಿಸಿದರು.
ಚಿನ್ನದ ಪದಕ ವಿಜೇತರಿಗೆ ಗೌರವ
2025ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು. ಡಾ. ವೈಶಾಲಿ ಮಠಪತಿ-ಎಂ.ಡಿ. ಪ್ರಕೃತಿ ಚಿಕಿತ್ಸೆ, ಡಾ.ನವ್ಯಾ-ಎಂ.ಡಿ. ಯೋಗ ಕ್ಲಿನಿಕಲ್, ಡಾ.ಮಂಜುನಾಥ್ ಆರ್- ಎಂ.ಡಿ. ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡರು. ನಾಲ್ಕು ವರ್ಷಗಳ ಶೈಕ್ಷಣಿಕ ಪಠ್ಯಕ್ರಮದಲ್ಲಿ ಅತ್ಯಧಿಕ ಅಂಕ ಪಡೆದ ಡಾ.ಪ್ರತೀಕ್ಷಾ ಎಚ್. ಚಿನ್ನದ ಪದಕ ಪಡೆದರು. ಇವರು ಯೋಗ ಮತ್ತು ಯೋಗ ಥೆರಪಿ ವಿಷಯದಲ್ಲೂ ಚಿನ್ನದ ಪದಕ ಪಡೆದುಕೊಂಡರು.
ಡಾ.ಪ್ರಕೃತಿ ಕೆ. 2022- 23ನೇ ಶೈಕ್ಷಣಿಕ ವರ್ಷದಲ್ಲಿ ಅಕ್ಯುಪಂಕ್ಚರ್ ಮತ್ತು ಮೆಡಿಸಿನ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ಎರಡನೇ ಅಗ್ರಸ್ಥಾನ ಪಡೆದುಕೊಂಡರು. ಡಾ.ಶಿಲ್ಪಾ ವೈ. ಬಿಎನ್‌ವೈಎಸ್‌ನಲ್ಲಿ ನಾಲ್ಕನೇ ಸ್ಥಾನ ಮತ್ತು ಡಾ.ಜಿ.ಪ್ರಫುಲ್ಲ ತಮನ್ಕರ್ ಬಿಎನ್‌ವೈಎಸ್‌ನಲ್ಲಿ ಐದನೇ ಸ್ಥಾನ ಪಡೆದುಕೊಂಡರು.